ADVERTISEMENT

ಅಕ್ರಮಕ್ಕೆ ತಡೆ; ಅಭಿವೃದ್ಧಿ ನಗಣ್ಯ

ದೂಳಿನಿಂದ ಉಸಿರಾಟ ಸಮಸ್ಯೆ; ಬೆಳೆ ಇಳುವರಿ ಕುಸಿತ; ನೀರಿನ ಝರಿ ನಾಶ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಜುಲೈ 2021, 19:30 IST
Last Updated 24 ಜುಲೈ 2021, 19:30 IST
ಅದಿರು ಸಾಗಣೆ ಲಾರಿಗಳ ಓಡಾಟದಿಂದ ಸಂಡೂರು ತಾಲ್ಲೂಕಿನ ರಾಮಗಡ ರಸ್ತೆ ಅಸ್ತಿತ್ವ ಕಳೆದುಕೊಂಡಿದೆ ಚಿತ್ರ: ವಿ.ಎಂ. ನಾಗಭೂಷಣ್‌
ಅದಿರು ಸಾಗಣೆ ಲಾರಿಗಳ ಓಡಾಟದಿಂದ ಸಂಡೂರು ತಾಲ್ಲೂಕಿನ ರಾಮಗಡ ರಸ್ತೆ ಅಸ್ತಿತ್ವ ಕಳೆದುಕೊಂಡಿದೆ ಚಿತ್ರ: ವಿ.ಎಂ. ನಾಗಭೂಷಣ್‌   

ಹೊಸಪೇಟೆ (ವಿಜಯನಗರ): ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ತಡೆ ಬಿದ್ದು ದಶಕವೇ ಕಳೆದಿದೆ. ಆದರೆ, ಪರಿಸರ, ಜನಜೀವನದ ಮೇಲೆ ಬೀರಿದ ವ್ಯತಿರಿಕ್ತ ಪರಿಣಾಮ ಇನ್ನೂ ಹಾಗೆಯೇ ಇದೆ.

ಅಕ್ರಮ ಗಣಿಗಾರಿಕೆಯಿಂದ ಸಂಡೂರು ತಾಲ್ಲೂಕು ಒಂದರಲ್ಲೇ 1,700 ಹೆಕ್ಟೇರ್‌ ಅರಣ್ಯ ನಾಶವಾಗಿದೆ. ಬಳ್ಳಾರಿ ಮತ್ತು ಹೊಸಪೇಟೆ ನಂತರದ ಸ್ಥಾನದಲ್ಲಿವೆ. ಅವಿಭಜಿತ ಜಿಲ್ಲೆಯಲ್ಲಿ ಶೇ 90ಕ್ಕೂ ಹೆಚ್ಚು ಅರಣ್ಯ ಪ್ರದೇಶ ಗಣಿಗಾರಿಕೆಯಿಂದ ಸಂಪೂರ್ಣ ನಾಶವಾಗಿದೆ. ಈಗಲೂ 4,684 ಹೆಕ್ಟೇರ್‌ ಅರಣ್ಯದಲ್ಲಿ ಗಣಿಗಾರಿಕೆ ನಡೆಯುತ್ತಿದೆ.

ಅಕ್ರಮ ಗಣಿಗಾರಿಕೆ ಸಂಪೂರ್ಣವಾಗಿ ನಿಂತರೂ ಪರಿಸರ ಪುನಶ್ಚೇತನ ಕಾರ್ಯವನ್ನು ಇದುವರೆಗೆ ಕೈಗೊಂಡಿಲ್ಲ. ಕೆಲ ಗಣಿಗಳಲ್ಲಿ ತಡೆಗೋಡೆ ನಿರ್ಮಾಣ, ಹಸಿರು ಪಟ್ಟಿ, ಗಿಡ ಬೆಳೆಸುವ ಕಾರ್ಯ ನಡೆಯುತ್ತಿದೆ. ಆದರೆ, ವೇಗ ಆಮೆಗತಿಯದು. ಜಿಲ್ಲಾ ಖನಿಜ ನಿಧಿಯಿಂದ ₹300 ಕೋಟಿಗೂ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ. ಗಣಿಬಾಧಿತ ಪ್ರದೇಶಗಳಲ್ಲಿ ರಸ್ತೆ, ಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರು, ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಜನರಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ. ನಗರ ಕೇಂದ್ರೀತವಾಗಿ ಈ ಕೆಲಸಗಳು ನಡೆಯುತ್ತಿರುವುದರಿಂದ ಗಣಿಬಾಧಿತ ಪ್ರದೇಶದ ಪುನರುಜ್ಜೀವನ ಸಾಧ್ಯವಾಗಿಲ್ಲ.

ADVERTISEMENT

ಜಿಂದಾಲ್‌, ಎನ್‌ಎಂಡಿಸಿ, ಸ್ಮಯೊರ್‌, ಕೆಎಸ್‌ಎಂಸಿಎಲ್‌ ಹೊರತು ಪಡಿಸಿದರೆ ಹೆಚ್ಚಿನ ಕಂಪನಿಯವರು ಕನ್ವೇಯರ್‌ ಬೆಲ್ಟ್‌ ಅಳವಡಿಸಿಕೊಂಡಿಲ್ಲ. ಈ ಹಿಂದಿನಂತೆಯೇ ಅದಿರು ಲಾರಿಗಳ ಓಡಾಟ ಸಾಮಾನ್ಯವಾಗಿದೆ. ಚಳಿಗಾಲ, ಬೇಸಿಗೆಯಲ್ಲಿ ದೂಳಿನ ಸಮಸ್ಯೆಯಿದ್ದರೆ, ಮಳೆಗಾಲದಲ್ಲಿ ರಸ್ತೆಗಳೆಲ್ಲ ಹೊಂಡಗಳಾಗಿ ಬದಲಾಗುತ್ತವೆ. ದೂಳಿನಿಂದ ಸುತ್ತಮುತ್ತಲಿನ ಪರಿಸರ, ರಸ್ತೆಗಳು ಸದಾ ಕೆಂಪಾಗಿರುತ್ತವೆ. ಜನರು ಸದಾ ಮೂಗು, ಬಾಯಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ಹಲವೆಡೆ ಸಾಂಪ್ರದಾಯಿಕ ನೀರಿನ ಝರಿಗಳು ನಾಶಗೊಂಡಿವೆ. ವನ್ಯಮೃಗಗಳು ಆವಾಸ ಸ್ಥಾನ ಕಳೆದುಕೊಂಡಿವೆ. ವಿಪರೀತ ದೂಳಿನಿಂದ ಬೆಳೆಯ ಇಳುವರಿ ಕಡಿಮೆಯಾಗಿದೆ. ಜನ ಉಸಿರಾಟದ ಸಮಸ್ಯೆ, ಚರ್ಮರೋಗಗಳಿಂದ ಬಳಲುತ್ತಿದ್ದಾರೆ.

ಸಂಡೂರು ತಾಲ್ಲೂಕಿನ ನಂದಿಹಳ್ಳಿ, ಭುಜಂಗನಗರ, ನಾರಾಯಣಪುರ, ಸುಶೀಲಾ ನಗರ, ಸಿದ್ದಾಪುರ ರಸ್ತೆಯಲ್ಲಿ ಓಡಾಡಿದರೆ ಸಾಲು ಸಾಲು ಅದಿರಿನ ಲಾರಿಗಳ ದರ್ಶನವಾಗುತ್ತದೆ. ನಿತ್ಯ ಅಪಘಾತಗಳು ಸರ್ವೇ ಸಾಮಾನ್ಯ. ಹೊಸಪೇಟೆ–ಸಂಡೂರು, ತೋರಣಗಲ್ಲು–ಬಳ್ಳಾರಿ ರಸ್ತೆಯಲ್ಲೂ ಇದೇ ಪರಿಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.