ADVERTISEMENT

ರಾಜ್ಯದಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ?: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:44 IST
Last Updated 16 ಫೆಬ್ರುವರಿ 2026, 16:44 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಬೆಂಗಳೂರು: ‘ರಾಜ್ಯದಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ? ಹೈಕೋರ್ಟ್ ಪದೇ ಪದೇ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಎಂದು ಹೇಳುತ್ತಲೇ ಇದೆ.‌ ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ’ ಎಂದು ಸಚಿವ ಎಚ್.ಸಿ. ಮಹದೇವಪ್ಪ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

‘ನಾಯಕತ್ವದ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ನಾಯಕರುಗಳಿಂದಲೇ ಗೊಂದಲ ಸೃಷ್ಟಿ ಆಗುತ್ತಿದೆಯಲ್ಲವೇ’ ಎಂದು ಸುದ್ದಿಗಾರರು ಹೇಳಿದಾಗ ಮಹದೇವಪ್ಪ ಈ ರೀತಿ ಪ್ರತಿಕ್ರಿಯಿಸಿದರು.

‘ಹೈಕಮಾಂಡ್‌ ಮಧ್ಯಪ್ರವೇಶಿಸಬೇಕು’ ಎಂದು ಶಾಸಕರು ಹೇಳುತ್ತಿದ್ದೀರಲ್ಲ? ಎಂಬ ಪ್ರಶ್ನೆಗೆ, ‘ಹೈಕಮಾಂಡ್‌ಗೆ ನಿರ್ದೇಶನ ನೀಡುವವರು ಯಾರು? ನಾನೂ, ನೀವೂ ಕೊಡಲು ಆಗುವುದಿಲ್ಲ. ಹೈಕಮಾಂಡ್‌ನವರೇ ಹೇಳಬೇಕು. ಬಾಲವೇ ನಾಯಿಯನ್ನು ಅಲುಗಾಡಿಸಿದರೆ? ಹೈಕಮಾಂಡ್‌ ಅನ್ನು ಅಲುಗಾಡಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ADVERTISEMENT

‘ಹೈಕೋರ್ಟ್‌ ಹೇಳಿರುವುದಕ್ಕೂ ರಾಜ್ಯ ನಾಯಕರಿಗೂ ಏನು ಸಂಬಂಧ? ಹಾದಿಬೀದಿಯಲ್ಲಿ ಮಾತನಾಡುವುವರನ್ನು ಬಾಯಿ ಮುಚ್ಚಿಸಬೇಕು ಎಂಬುದು ನಿಮ್ಮ ಮಾತಿನ ಅರ್ಥವೇ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ನನಗೆ ಗೊತ್ತಿಲ್ಲಪ್ಪ. ನೀವೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಏನೂ ಹೇಳಿಲ್ಲ. ಇಲ್ಲಿ ನಾಯಕತ್ವ ಗಟ್ಟಿಯಾಗಿದೆ. ಪದೇ ಪದೇ ಮಾತನಾಡುವ ಅಗತ್ಯವಿಲ್ಲ’ ಎಂದಷ್ಟೇ ಹೇಳಿದರು.

‘ಅದಿರಲಿ, ನಾಯಿಗೂ ಶಾಸಕರಿಗೂ ಏನು ಸಂಬಂಧ’ ಎಂಬ ಪ್ರಶ್ನೆಗೆ, ‘ಗೊಂದಲ, ವಿವಾದ ಸೃಷ್ಟಿಸಬೇಡಿ. ಬೀದಿಗಳಲ್ಲಿ ನಾಯಿ ಕಡಿತ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹುಚ್ಚು ನಾಯಿಗಳೆಲ್ಲಾ ಹೆಚ್ಚಾಗಿವೆ. ಅವು ಕಡಿದರೆ ರೇಬಿಸ್ ಬರುತ್ತದೆ. ಹೀಗಾಗಿ ಜಾಗೃತಿ ಮೂಡಿಸಿ ಎಂದು ಹೇಳುತ್ತಿದ್ದೇನೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದರಲ್ಲಿ ಅನಗತ್ಯ ವಿವಾದ, ಗೊಂದಲ ಸೃಷ್ಟಿಸಬೇಡಿ’ ಎಂದು ಮನವಿ ಮಾಡಿದರು.

ವ್ಯಕ್ತಿ ಪೂಜೆ ಮಾಡುವುದಿಲ್ಲ

‘ವ್ಯಕ್ತಿಪೂಜೆ ಮಾಡಬೇಡಿ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ವ್ಯಕ್ತಿ ಪೂಜೆಯು ಸರ್ವಾಧಿಕಾರಿಯನ್ನು ಸೃಷ್ಟಿಸುತ್ತದೆ. ಸರ್ವಾಧಿಕಾರಿಯು ಪ್ರಜಾಪ್ರಭುತ್ವ ಧ್ವಂಸ ಮಾಡುತ್ತಾನೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ವ್ಯಕ್ತಿ ಪೂಜೆ ಮಾಡುವುದಿಲ್ಲ’ ಎಂದು ಮಹದೇವಪ್ಪ ಹೇಳಿದರು.

‘ಸಿದ್ದರಾಮಯ್ಯ ಅವರ ಪೂಜೆ ಮಾಡಿಲ್ಲವೇ’ ಎಂಬ ಪ್ರಶ್ನೆಗೆ, ‘ನಾನೆಂದೂ ಸಿದ್ದರಾಮಯ್ಯ ಅವರ ಪೂಜೆ ಮಾಡಿಲ್ಲ. ಬುದ್ದ, ಬಸವ, ಅಂಬೇಡ್ಕರ್‌ ಬಿಟ್ಟರೆ ಬೇರೆ ಯಾರ ಪೂಜೆಯನ್ನೂ ಮಾಡಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.