ADVERTISEMENT

ಮುಸ್ಲಿಮರ ಮೀಸಲಾತಿ ಮರಳಿ ಕೊಡಲಿ: ಎಚ್‌.ಡಿ.ದೇವೇಗೌಡ ಸವಾಲು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
<div class="paragraphs"><p>ಎಚ್‌.ಡಿ.ದೇವೇಗೌಡ</p></div>

ಎಚ್‌.ಡಿ.ದೇವೇಗೌಡ

   

ಬೆಂಗಳೂರು: 'ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನನ್ನ ಜಾತ್ಯತೀತ ನಿಲುವು ಪ್ರಶ್ನಿಸುವ ಕಾಂಗ್ರೆಸ್‌, ತಾಕತ್ತಿದ್ದರೆ ಮುಸ್ಲಿಂ ಸಮುದಾಯಕ್ಕೆ ನಾನು ಕೊಟ್ಟ ಶೇ 4 ರಷ್ಟು ಮೀಸಲಾತಿ ಮರಳಿ ಕೊಡಲಿ" ಎಂದು ಜೆಡಿಎಸ್‌ ರಾಷ್ಟ್ರೀಯ ನಾಯಕ ಎಚ್‌.ಡಿ.ದೇವೇಗೌಡ ಸವಾಲು ಹಾಕಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಟೀಕಿಸಿದಂತೆ ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿಲ್ಲ. ಯಾರದು ಶೂನ್ಯ ಸಾಧನೆ ಎನ್ನುವುದಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯದ ನಾಯಕರೊಬ್ಬರಿಗೆ ಸಾರಿಗೆ ಮಂತ್ರಿ ಮಾಡಿದ್ದರು. ಕುಮಾರಸ್ವಾಮಿ ಸರ್ಕಾರ ಕೆಡವಿದವರ ಜತೆ ಸೇರಿಕೊಂಡು ಆ ಮಹಾನುಭಾವ ಈಗ ನಮ್ಮನ್ನೇ ಟೀಕೆ ಮಾಡುತ್ತಿದ್ದಾರೆ. ಮುದುಕಪ್ಪನನ್ನ ಕಟ್ಟಿಕೊಂಡು ಏನೇನೋ ಮಾಡೋಕೆ ಹೋಗ್ತಿದ್ದಾರೆ ಅಂತಾರೆ. ಈ ಮುದುಕಪ್ಪನಿಗೆ ಸ್ವಾಭಿಮಾನ ಇದೆ. ನಿಮಗೆ ನನ್ನ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ ಅಷ್ಟೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

‘ಯಾವುದೇ ಕಾಮಗಾರಿಯ ಹಣ ಭರವಸೆ ಪತ್ರ ನೀಡಲು ಐದು ಪೈಸೆ ಪಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಐದು ಪೈಸೆ ತಗೊಳ್ಳೋದು ಎಲ್ಲಾದರೂ ಉಂಟೆ? ಅದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುತ್ತಾ? ನೀರಾವರಿ ಕಾರ್ಯದರ್ಶಿ ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ. ನಾನೊಬ್ಬ ಸಣ್ಣ ರಾಜಕಾರಣಿ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಅಂತಹ ದೊಡ್ಡ ಹುದ್ದೆಗೆ ಕಿರಿಯ ಅಧಿಕಾರಿ ನೇಮಿಸಿದ್ದಾರೆ’ ಎಂದರು.

ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ ನೀರಿಗಾಗಿ ಹಿಂದಿನಿಂದಲೂ ಹೋರಾಟ ನಡೆದಿದೆ. ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟು ಕಟ್ಟಿಸಿದ್ದೇವೆ. ಹೇಮಾವತಿಯಲ್ಲಿ ನೀರಿದೆ. ಅಲ್ಲಿನ ಹಳ್ಳಿಗಳಿಗೆ, ಬೆಂಗಳೂರಿಗೂ ನೀರು ಕೊಡಬೇಕು. ಟ್ಯಾಂಕರ್‌ ನೀರಿಗೆ ನ್ಯಾಯುತ ದರ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಗ್ಯಾರಂಟಿ ಅನುಷ್ಠಾನ, ಸಮೀಕ್ಷೆ ಹೆಸರಲ್ಲಿ ಸರ್ಕಾರ ತೆರಿಗೆ ಹಣ ದುಂದು ವೆಚ್ಚ ಮಾಡುತ್ತಿದೆ. ಅದಕ್ಕಾಗಿ ಐದು ಜನ ಮಂತ್ರಿಗಳು, ಮೇಲುಸ್ತುವಾರಿ ಸಮಿತಿ ನೇಮಿಸಿದೆ. ಹಲವರಿಗೆ ಸಂಪುಟ ದರ್ಜೆಯ ಸ್ಥಾನ ನೀಡಿದೆ. ರಾಜ್ಯದ ತೆರಿಗೆ ಹಣ ನೀರಿನಂತೆ ಖರ್ಚು ಮಾಡುತ್ತಾ, ಕೇಂದ್ರ ಸರ್ಕಾರವನ್ನು ದೂರುತ್ತಿದೆ. ಬೆಳಿಗ್ಗೆ ಎದ್ದು, ಮಲಗುವವರೆಗೂ ಮೋದಿ ಅವರನ್ನು ಟೀಕಿಸುವುದೇ ಕೆಲಸವಾಗಿದೆ. ಮಾತಿಗೂ ಇತಿಮಿತಿ ಬೇಡವೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.