ADVERTISEMENT

ಕನ್ನಡಿಗ ಪ್ರತಿನಿಧಿಗಳೇ ಇಲ್ಲದೆ ನಿಷ್ಪಕ್ಷಪಾತ ಅಧ್ಯಯನ ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 12:02 IST
Last Updated 16 ಸೆಪ್ಟೆಂಬರ್ 2020, 12:02 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು:ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆಯ ನಿಷ್ಪಕ್ಷಪಾತ ಅಧ್ಯಯನ ಸಾಧ್ಯವೆ? ದಕ್ಷಿಣ ಭಾರತೀಯರಿಲ್ಲದೇ ಒಟ್ಟು ಭಾರತದ ಇತಿಹಾಸ ಅಧ್ಯಯನಕ್ಕೆ ಒಳಪಡುವುದಾದರೂ ಹೇಗೆ? ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ, ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯಲ್ಲಿ ದಕ್ಷಿಣ ಭಾರತಕ್ಕೆ ಸಂಬಂಧಿಸಿದವರನ್ನುಸದಸ್ಯರನ್ನಾಗಿ ನೇಮಿಸದೇ ಇರುವುದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ, ಇದರಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇತಿಹಾಸ, ಸಂಸ್ಕೃತಿ ವಿಚಾರವಾಗಿ ಪೂರ್ವಾಗ್ರಹಗಳನ್ನು ಹೊಂದಿರುವಂತೆ ಕಾಣುವ, ಉತ್ತರ ಭಾರತೀಯರು ತುಂಬಿರುವ ಈ ಸಮಿತಿ ನಡೆಸುವ ಅಧ್ಯಯನದ ವಸ್ತುನಿಷ್ಠತೆ ಬಗ್ಗೆ ಅನುಮಾನಗಳು ದಟ್ಟವಾಗಿವೆ. ಸಮಿತಿಯ ಪುನಾರಚನೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಲಿ’ ಎಂದು ಆಗ್ರಹಿಸಿದ್ದಾರೆ.

‘ಕನ್ನಡಿಗ ಪ್ರತಿನಿಧಿಗಳು ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆಯ ನಿಷ್ಪಕ್ಷಪಾತ ಅಧ್ಯಯನ ಸಾಧವೇ? ದಕ್ಷಿಣ ಭಾರತೀಯರಿಲ್ಲದೇ ಒಟ್ಟು ಭಾರತದ ಇತಿಹಾಸ ಅಧ್ಯಯನಕ್ಕೆ ಒಳಪಡುವುದಾದರೂ ಹೇಗೆ? ಈ ದೇಶವನ್ನು ಅಂಬೆಗೆ ಹೋಲಿಸಿದವರು ನಾವು. ಹೆಣ್ಣನ್ನು ಪೂಜಿಸುವ ದೇಶದ ಸಂಸ್ಕೃತಿ ಅಧ್ಯಯನ ಮಾಡುವ ಸಮಿತಿಯಲ್ಲಿ ಮಹಿಳೆಗೆ ಸ್ಥಾನವೇ ಇಲ್ಲವಾಗಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.