ADVERTISEMENT

ಹಿಂದಿ ಕಾರಣಕ್ಕೆ ಕನ್ನಡಿಗರು, ಇತರ ಭಾಷಿಕರು ಎಷ್ಟು ತ್ಯಾಗ ಮಾಡಬೇಕು: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2020, 8:21 IST
Last Updated 23 ಆಗಸ್ಟ್ 2020, 8:21 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ಹಿಂದಿ ಬಾರದೆಂಬ ಕಾರಣಕ್ಕೆ ಕನ್ನಡಿಗರೂ ಸೇರಿದಂತೆ ಮಿಕ್ಕೆಲ್ಲ ಭಾಷೆಗಳ ಜನ ಈ ದೇಶದಲ್ಲಿ ಇನ್ನೆಷ್ಟು ತ್ಯಾಗ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿ ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ವೈದ್ಯ ರಾಜೇಶ್‌ ಕೊಟೆಚಾ 'ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ' ಎಂದು ಹೇಳಿದ್ದರ ವಿರುದ್ಧ ಎಚ್‌.ಡಿ ಕುಮಾರಸ್ವಾಮಿ ಭಾನುವಾರ ಸರಣಿ ಟ್ವೀಟ್‌ ಮಾಡಿ ಕಿಡಿ ಕಾರಿದ್ದಾರೆ.

‘ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿಯಲ್ಲಿ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕೊಟೆಚಾ 'ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ,’ ಎಂದು ಹೇಳಿರುವುದು ತಿಳಿಯಿತು. ಇದೇನು ಇಂಗ್ಲಿಷ್‌ ಬಾರದೆಂಬ ವಿನಂತಿಯೋ, ಹಿಂದಿ ಹೇರಬೇಕು ಎಂಬ ನಾಚಿಕೆ ಇಲ್ಲದ ಉತ್ಸಾಹವೋ?,’ ಎಂದು ಪ್ರಶ್ನೆ ಕೇಳಿದ್ದಾರೆ.

‘ಸಂವಿಧಾನ ಬದ್ಧ ‘ಒಕ್ಕೂಟ ವ್ಯವಸ್ಥೆ’ ಎಂಬುದು ಈ ದೇಶದ ಒಗ್ಗಟ್ಟಿನ ಮಂತ್ರ. ಇಲ್ಲಿನ ಪ್ರತಿ ಭಾಷೆಗಳೂ ಒಕ್ಕೂಟ ವ್ಯವಸ್ಥೆಯ ಭಾಗ. ಹೀಗಿರುವಾಗ, ಹಿಂದಿ ಮಾತನಾಡಲು ಬಾರದ ಕಾರಣಕ್ಕೆ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಿ ಎಂಬುದು ಒಕ್ಕೂಟ ವ್ಯಸ್ಥೆಯ ಉಲ್ಲಂಘನೆಯಲ್ಲವೇ? ಸಂವಿಧಾನ ವಿರೋಧಿ ನಡೆಯಲ್ಲವೇ?’ ಎಂದು ಕೇಳಿದ್ದಾರೆ.

‘ಹಿಂದಿ ಬಾರದೆಂಬ ಕಾರಣಕ್ಕೆ ಕನ್ನಡಿಗರೂ ಸೇರಿದಂತೆ ಮಿಕ್ಕೆಲ್ಲ ಭಾಷೆಗಳ ಜನ ಈ ದೇಶದಲ್ಲಿ ಇನ್ನೆಷ್ಟು ತ್ಯಾಗ ಮಾಡಬೇಕು? ಹಿಂದಿ ಶ್ರೇಷ್ಠತೆಯ ಗೀಳಿನಲ್ಲಿರುವ ಆಯುಷ್‌ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕೊಟೆಚಾ ಅವರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳ ಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು,’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.