ADVERTISEMENT

ರಾಜಕೀಯದಿಂದ, ರಾಜಕೀಯಕ್ಕಾಗಿ, ರಾಜಕೀಯಕ್ಕೋಸ್ಕರ ಎಂದಾದ ಪ್ರಜಾಪ್ರಭುತ್ವ: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2022, 4:26 IST
Last Updated 18 ಫೆಬ್ರುವರಿ 2022, 4:26 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ   

ಬೆಂಗಳೂರು: ಕಳೆದೆರಡು ದಿನಗಳ ವಿಧಾನಮಂಡಲ ಕಲಾಪ ಗದ್ದಲ, ಪ್ರತಿಭಟನೆಯಿಂದ ವ್ಯರ್ಥವಾಗಿರುವುಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವತ್ತು ಪ್ರಜಾಪ್ರಭುತ್ವವೆಂದರೆ; ‘ರಾಜಕೀಯದಿಂದ, ರಾಜಕೀಯಕ್ಕಾಗಿ, ರಾಜಕೀಯಕ್ಕೋಸ್ಕರವೇ’ ಎನ್ನುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಂಪುಕೋಟೆಯ ಮೇಲೆ ಭಗವಧ್ವಜ ಹಾರಾಡಲಿದೆ ಎಂಬ ಈಶ್ವರಪ್ಪ ಅವರ ಹೇಳಿಕೆಯ ವಿರುದ್ಧ ಕಾಂಗ್ರೆಸ್‌ ಸದನದ ಒಳಗೆ ಎರಡು ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದೆ. ಹೀಗಾಗಿ ಎರಡು ದಿನಗಳ ಕಲಾಪ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಶುಕ್ರವಾರ ಬೆಳಗ್ಗೆ ಟ್ವೀಟ್‌ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ‘ ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್‌ ಹೇಳಿದ ಈ ಮಾತು ಪ್ರಜಾಸತ್ತೆಯನ್ನು ಗೌರವಿಸುವ ಪ್ರತಿ ವ್ಯಕ್ತಿಗೂ ದಾರಿದೀಪ. ಆದರೆ, ಇವತ್ತು ಪ್ರಜಾಪ್ರಭುತ್ವವೆಂದರೆ; ‘ರಾಜಕೀಯದಿಂದ, ರಾಜಕೀಯಕ್ಕಾಗಿ, ರಾಜಕೀಯಕ್ಕೊಸ್ಕರವೇ‘ ಎನ್ನುವಂತಾಗಿದೆ ಎಂದು ಎಚ್‌ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಳೆದೆರಡು ದಿನಗಳ ವಿಧಾನಮಂಡಲ ಕಲಾಪ ರಾಜಕೀಯ ಪ್ರತಿಷ್ಠೆಗೆ ಆಹುತಿಯಾಗಿದೆ. ಬೆಳಗಾವಿ ಕಲಾಪವನ್ನು ಬಲಿ ಪಡೆದ ಮೇಲೂ ರಾಜ್ಯಪಾಲರ ಭಾಷಣದ ಮೇಲೆ ಅಮೂಲ್ಯ ಚರ್ಚೆ ನಡೆಸಬೇಕಿದ್ದ ಈ ಸದನಕ್ಕೂ ಅದೇ ಚಾಳಿ ವಕ್ಕರಿಸಿದೆ. ಪ್ರಜಾಪ್ರಭುತ್ವಕ್ಕೆ ಗ್ರಹಣ ಹಿಡಿಸುವ ಕೆಲಸ ನಡೆದಿದೆ’ ಎಂದು ಅವರು ಹೇಳಿದ್ದಾರೆ.

‘ಹತ್ತು ನಿಮಿಷ ಧರಣಿ, ಆಮೇಲೆ ಕಲಾಪ ಮುಂದೂಡುವುದು. ಸದನ ನಡೆಯುವ ರೀತಿ ಇದೇನಾ? ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ ₹1.5-2 ಕೋಟಿ ಪೋಲಾಗುವ ಜನರ ತೆರಿಗೆ ಹಣಕ್ಕೆ ಉತ್ತರದಾಯಿತ್ವ ಯಾರದ್ದು? ಅವರ ನಿರೀಕ್ಷೆಗಳನ್ನು ʼಕಾಲ ಕಸʼ ಮಾಡಿಕೊಂಡ ರಾಜಕೀಯ ಪ್ರತಿಷ್ಠೆಗೆ ಕೊನೆ ಇಲ್ಲವೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಕೋವಿಡ್‌ʼನಿಂದ ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಯಿತು. ಈಗ ಹಿಜಾಬ್‌, ಕೇಸರಿ ಶಾಲು ಗಲಾಟೆಯಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಹೊಣೆ ಯಾರು? ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಇಲ್ಲವೇ?’ ಎಂದು ಅವರು ಕೇಳಿದ್ದಾರೆ.

‘ಕಲಾಪಕ್ಕೆ ಜನಪರ ಅಜೆಂಡಾ ಇರಬೇಕೆ ವಿನಾ ಚುನಾವಣೆ ಅಜೆಂಡಾ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನವು ಮತ ಗಳಿಕೆಗೆ ಗುರಾಣಿ ಆಗಿರುವುದು ದುರದೃಷ್ಟಕರ. ತಮ್ಮ ಪ್ರತಿಷ್ಠೆಗೆ ಕಲಾಪವನ್ನು ಹಳಿತಪ್ಪಿಸಿ ಜನರ ನಿರೀಕ್ಷೆಗಳನ್ನು ಹೊಸಕಿ ಹಾಕುವುದು ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ನಿದರ್ಶನ ಎನ್ನುವುದು ನನ್ನ ಅಭಿಪ್ರಾಯ‘ ಎಂದು ಅವರು ಹೇಳಿದ್ದಾರೆ.

‘ಜನರು ಕಷ್ಟದಲ್ಲಿದ್ದಾರೆ. ಕೋವಿಡ್‌ʼನಿಂದ ಅವರ ಬದಕಿನ ಬವಣೆ ಹೆಚ್ಚಿ ರೋಸಿ ಹೋಗಿದ್ದಾರೆ. ಅವರು ರೊಚ್ಚಿಗೇಳುವ ಮುನ್ನ ಆಡಳಿತಾರೂಢ ಬಿಜೆಪಿ ಮತ್ತು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್‌ ಎಚ್ಚೆತ್ತುಕೊಂಡು ತಮ್ಮ ಜನವಿರೋಧಿ ನೀತಿ ಬದಲಿಸಿಕೊಳ್ಳಬೇಕು. ವಿಧಾನ ಕಲಾಪಕ್ಕೆ ಕುಣಿಕೆ ಬಿಗಿಯುವ ಹೀನ ರಾಜಕಾರಣ ನಿಲ್ಲಲಿ’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.