ADVERTISEMENT

ನನಗಾಗಿ ಕಾಲಭೈರವನಲ್ಲಿ ಪ್ರಾರ್ಥಿಸಿದ ಶ್ರೀಗಳ ಫೋನ್‌ ಕದ್ದಾಲಿಸಿಲ್ಲ:ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 10:37 IST
Last Updated 29 ಸೆಪ್ಟೆಂಬರ್ 2019, 10:37 IST
   

ಬೆಂಗಳೂರು: ಎಚ್‌.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ ಕದ್ದಾಲಿಕೆ ಮಾಡಲಾಗಿತ್ತು ಎಂಬ ಗುಮಾನಿ ಮತ್ತುಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಪಾತ್ರವಿದೆ ಎಂಬ ಆರೋಪಗಳ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‌ಡಿಕೆ, ಶ್ರೀಗಳ ಫೋನ್‌ ಕದ್ದಾಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಇಂದು ಸರಣಿ ಟ್ವೀಟ್‌ಗಳನ್ನು ಮಾಡಿರುವ ಎಚ್‌ಡಿಕೆ, ಶ್ರೀಗಳ ಫೋನ್‌ ಕದ್ದಾಲಿಕೆ ನಡೆದಿಲ್ಲಎಂದೂ ಹೇಳಿದ್ದಾರೆ.

ಏನಿದೆ ಟ್ವೀಟ್‌ನಲ್ಲಿ?

ADVERTISEMENT

‘ನನ್ನ ಅಧಿಕಾರವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ವರದಿಗಳು, ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟು ಮಾಡಿವೆ. ಎಲ್ಲಕ್ಕೂ ಮಿಗಿಲಾಗಿ ಸ್ವಾಮೀಜಿಗಳಲ್ಲಿ ಮೂಡಿರಬಹುದಾದ ಬೇಸರ ನನ್ನ ನೋವನ್ನು ಹೆಚ್ಚಿಸಿದೆ‌’ ಎಂದಿದ್ದಾರೆ.

‘ನಿರ್ಮಲಾನಂದರು ನನಗೆ ನೈತಿಕ ಬಲವಾಗಿದ್ದವರು, ತಮ್ಮ ಸಾಮಾಜಿಕ ಕಾರ್ಯಗಳ ನೆರಳಲ್ಲಿ ನನಗೆ ಮಾರ್ಗದರ್ಶನ ಮಾಡಿದವರು, ನನಗಾಗಿ ಕಾಲಭೈರವನಲ್ಲಿ ಪ್ರಾರ್ಥಿಸಿದವರು. ಅವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ? ಖಂಡಿತ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಸಂಭವಿಸದ ತಪ್ಪೊಂದಕ್ಕೆ ಅಶೋಕ್ ಅವರು ಎಲ್ಲರಿಗಿಂತಲೂ ಮುಂದೆ ಹೋಗಿ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ. ಅವರ ಆತುರಕ್ಕೆ ಮರುಕವಿದೆ. ಅದೇ ಹೊತ್ತಲ್ಲೇ ಶ್ರೀಗಳಿಗಾಗುತ್ತಿರುವ ಬೇಸರಕ್ಕೆ ಅತೀವ ನೋವಿದೆ ಎಂದು ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.