
ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮತ್ತೆ ಮರಳುವ ಸುಳಿವು ನೀಡಿದ್ದಾರೆ.
ಸಂಕ್ರಾಂತಿಯ ದಿನ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯ ರಾಜಕಾರಣದಿಂದ ದೂರ ಸರಿಯುವುದಿಲ್ಲ. ನಾನು ಎಲ್ಲಿರಬೇಕು ಎನ್ನುವುದನ್ನು ತೀರ್ಮಾನ ಮಾಡುವುದು ರಾಜ್ಯದ ಜನ. ರಾಜ್ಯ ರಾಜಕಾರಣಕ್ಕೆ ಯಾವಾಗ ಬರಬೇಕು ಎನ್ನುವ ಜನರ ಆಶಯದಂತೆ ಮುಂದಿನ ತೀರ್ಮಾನ ಮಾಡುತ್ತೇನೆ’ ಎಂದರು.
‘ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದರೂ ತಿಳಿದುಕೊಂಡಿದ್ದರೆ ಅದು ತಪ್ಪು. ಪ್ರಧಾನ ಮಂತ್ರಿಯವರು ಒಳ್ಳೆಯ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ರಾಜ್ಯ ರಾಜಕೀಯಕ್ಕೆ ಮರಳುವ ಕುರಿತು ತೀರ್ಮಾನ ಮಾಡುತ್ತೇನೆ’ ಎಂದರು.
‘ಜೆಡಿಎಸ್ ಪ್ರಸ್ತುತ ಎನ್‌ಡಿಎ ಭಾಗವಾಗಿದೆ. ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇರಬಾರದು. ರಾಜ್ಯದಲ್ಲಿ ಉತ್ತಮ ಸರ್ಕಾರ ತರಬೇಕು ಎನ್ನುವುದೇ ನನ್ನ ಆಶಯ. ರಾಜ್ಯದ ಆಡಳಿತ ಹೇಗೆ ನಡೆಯುತ್ತಿದೆ ಎಂದು ನಿರಂತರವಾಗಿ ಗಮನಿಸುತ್ತಿದ್ದೇನೆ. ಒಳ್ಳೆಯ ಸರ್ಕಾರ ಬಂದು ಜನರು ನೆಮ್ಮದಿಯಿಂದ ಇರಬೇಕು. ಅದಕ್ಕಾಗಿ ಜನರ ತೀರ್ಮಾನದಂತೆ ನಡೆಯುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.