ADVERTISEMENT

ರಾಜಕೀಯ ಧ್ರುವೀಕರಣಕ್ಕೆ ಕಾಂಗ್ರೆಸ್‌, ಬಿಜೆಪಿ ಯತ್ನ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 20:44 IST
Last Updated 21 ಆಗಸ್ಟ್ 2020, 20:44 IST
   

ಬೆಂಗಳೂರು: ‘ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ರಾಜಕೀಯ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಈ ಗಲಭೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಆಗಿದೆ. ಇದನ್ನು ಪರಾಮರ್ಶಿಸಿ, ದುಷ್ಟರನ್ನು ಶಿಕ್ಷಿಸುವ ಕಾರ್ಯ ಆಗಬೇಕಿತ್ತು ಎಂದು ಅವರು ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ ಅವರು, ಎರಡೂ ಪಕ್ಷಗಳಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಕಾಂಗ್ರೆಸ್‌ಗೆ ಪ್ರಶ್ನೆಗಳು
*ಡಿ.ಜೆ.ಹಳ್ಳಿ ಗಲಭೆ ಮತ್ತು ಪಾದರಾಯನಪುರ ಗಲಭೆಗಳ ಪ್ರಕರಣದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ರಕ್ಷಕನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಅನ್ಯ ಕೋಮಿನ ಜನರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಎದ್ದು ನಿಲ್ಲುವ ಕಾಂಗ್ರೆಸ್‌, ಪೌರತ್ವ ತಿದ್ದುಪಡಿ ಕಾಯ್ದೆಯಂತಹ ದುರಿತ ಕಾಲದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಏಕೆ ನಿಲ್ಲಲಿಲ್ಲ?

ADVERTISEMENT

* ಗಲಭೆಯಲ್ಲಿ ಆದ ನಷ್ಟವನ್ನು ಗಲಭೆಕೋರರಿಂದ ಸಂಗ್ರಹಿಸಲು ಹೊರಟ ಸರ್ಕಾರಕ್ಕೆ ‘ಇನ್ನೊಂದು ಕಡೆ’ ಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಾಂಗ್ರೆಸ್‌ ಹೇಳಿದೆ. ಹಾಗಾದರೆ, ಆ ‘ಇನ್ನೊಂದು ಕಡೆಯವರು’ ಎಂದರೆ ಯಾರು ಎಂಬುದನ್ನು ಕಾಂಗ್ರೆಸ್‌ ಧೈರ್ಯದಿಂದ ಹೇಳಬಹುದೇ?

*ಎಸ್‌ಡಿಪಿಐ ಅನ್ನು ನಿಷೇಧಿಸುವ ವಿಚಾರ ಬಂದಾಗ ಕಾಂಗ್ರೆಸ್‌ ಸಿಡಿದೆದ್ದು ನಿಲ್ಲುತ್ತದೆ. ತಾಕತ್ತಿದ್ದರೆ ಅದನ್ನು ನಿಷೇಧಿಸಿ ಎಂದು ಆಡಳಿತದಲ್ಲಿರುವವರಿಗೆ ಸವಾಲೆಸೆಯುತ್ತದೆ. ಅದರ ನಿಷೇಧವಾಗುವುದು, ಆಗದೇ ಇರುವುದರಲ್ಲಿ ಕಾಂಗ್ರೆಸ್‌ಗೆ ಏನು ಲಾಭವಿದೆ? ಇದರ ವಿವರಣೆ ನೀಡಬಹುದೇ?

*ಆಂತರಿಕ ಸಮಸ್ಯೆಯನ್ನು ಗಲಭೆಯಾಗಿ ಪರಿವರ್ತಿಸಿ, ಎರಡು ಕೋಮುಗಳ ನಡುವೆ ಮನಸ್ತಾಪ ತಂದಿಟ್ಟು, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ಕಾಂಗ್ರೆಸ್‌ಗೆ ಅಳುಕಿದೆಯೆ?

ಬಿಜೆಪಿಗೆ ಪ್ರಶ್ನೆಗಳು
* ಡಿ.ಜೆ.ಹಳ್ಳಿ ಪ್ರಕರಣ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗೃಹ ಇಲಾಖೆ, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯ. ಘಟನೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ?

* ಕಾಂಗ್ರೆಸ್‌ನ ಕೈವಾಡವಿದೆ ಎಂದು ಬೀದಿಯಲ್ಲಿ ಹೇಳುತ್ತಿರುವ ಬಿಜೆಪಿಯ ವಾಚಾಳಿ, ಬಾಯಿಬಡುಕ ಮಂತ್ರಿ, ಶಾಸಕರು ತಮ್ಮ ಬಳಿ ಇರುವ ಕಾಂಗ್ರೆಸ್‌ ವಿರುದ್ಧದ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳಿಗೆ ಏಕೆ ಕೊಡಬಾರದು?

* ಗಲಭೆ ಸೃಷ್ಟಿಸಲೆಂದೇ ಅನ್ಯ ರಾಜ್ಯಗಳಿಂದ ಗೂಂಡಾಗಳನ್ನು ಕರೆತರಲಾಗಿತ್ತು ಎಂದು ಬಿಜೆಪಿ ಆರಂಭದಲ್ಲಿ ಹುಯಿಲೆಬ್ಬಿಸಿತು. ಹಾಗಾದರೆ, ಘಟನೆಗೆ ಸಂಬಂಧಿಸಿದಂತೆ ಈವರೆಗೆ ಬಂಧನಕ್ಕೊಳಗಾದ ಅನ್ಯರಾಜ್ಯದ ಗೂಂಡಾಗಳು ಎಷ್ಟು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.