ADVERTISEMENT

ರಾಜ್ಯ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನು: ಎಚ್‌ಡಿಕೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 15:35 IST
Last Updated 8 ಡಿಸೆಂಬರ್ 2025, 15:35 IST
ಎಚ್.ಡಿ.ಕುಮಾರಸ್ವಾಮಿ 
ಎಚ್.ಡಿ.ಕುಮಾರಸ್ವಾಮಿ    

ನವದೆಹಲಿ: ಮಂಡ್ಯಕ್ಕೆ ಕುಮಾರಸ್ವಾಮಿ ಏನು ಕೊಟ್ಟಿದ್ದಾರೆ ಎಂದು ಕೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿರುವ ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ, ‘ನಾನು ಕೊಟ್ಟಿದ್ದನ್ನು ಪಟ್ಟಿ ಮಾಡಿ ಹೇಳುತ್ತೇನೆ. ಮೊದಲು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ ಹಾಗೂ ಈಗ ರಾಜ್ಯಕ್ಕೆ ಏನೇನು ಕೊಟ್ಟಿದ್ದೀರಿ ಎಂಬುದನ್ನು ಹೇಳಿ’ ಎಂದು ಸವಾಲು ಎಸೆದರು. 

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕೊಟ್ಟಿದ್ದನ್ನು ಹೇಳುತ್ತೇನೆ. ಸಿದ್ದರಾಮಯ್ಯ ಅವರೇ, ನೀವು ರೈತರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂಬುದನ್ನು ಹೇಳಿ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ಹಿಂದಿನ ಐದು ವರ್ಷ ಆಡಳಿತದಲ್ಲಿ 200ಕ್ಕೂ ಹೆಚ್ಚು ರೈತರು ಮಂಡ್ಯದಲ್ಲಿ ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಮ್ಮ ಕೊಡುಗೆ. ಅಂಥ ಕಷ್ಟಕಾಲದಲ್ಲಿ ನಾನು ಅಧಿಕಾರಕ್ಕೆ ಬಂದ ಮೇಲೆ ಅದೇ ಜಿಲ್ಲೆಯ ರೈತರ ₹900 ಕೋಟಿ ಸಾಲ ಮನ್ನಾ ಮಾಡಿದೆ. ಇದಕ್ಕಿಂತ ಕೊಡುಗೆ ಬೇಕಾ’ ಎಂದು ಪ್ರಶ್ನಿಸಿದರು. 

ಮೇಕೆದಾಟು–ಮಾತುಕತೆ ನಡೆಸಲಿ: ‘ಮೇಕೆದಾಟು ಯೋಜನೆ ಬಗ್ಗೆ ಜನರನ್ನು ಯಾಮಾರಿಸುವುದಕ್ಕೆ ನಮ್ಮ ನೀರು- ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ಆ ಹೆಸರಿನಲ್ಲಿ ಅವರು ಅಧಿಕಾರಕ್ಕೆ ಬಂದರು. ಮೇಕೆದಾಟು ಮಾತ್ರ ಇದ್ದಲ್ಲಿಯೇ ಇದೆ. ಕೇಂದ್ರ ಜಲ ಆಯೋಗದಲ್ಲಿ ವಾದ ಮಂಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವವರು ಇವರ ‘ರಾಜಕೀಯ ಪಾರ್ಟನರ್’ಗಳೇ ಆಗಿದ್ದಾರೆ. ಇವರು ಹೋಗಿ ಕುಳಿತು ಮಾತನಾಡಬೇಕಲ್ಲವೇ’ ಎಂದು ಅವರು ಕೇಳಿದರು. 

ADVERTISEMENT

‘ಮೇಕೆದಾಟು ಪ್ರದೇಶದಲ್ಲಿ ಸುಮಾರು 12 ಸಾವಿರ ಎಕರೆಯಷ್ಟು ಅರಣ್ಯ ಮುಳುಗಡೆ ಆಗುತ್ತದೆ. ವನ್ಯ ಸಂಪತ್ತು ನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ. ಬರೀ ಕೇಂದ್ರ ಸರ್ಕಾರ ಅಧಿಕಾರ ಮಾತ್ರವಲ್ಲ, ರಾಜ್ಯ ಸರ್ಕಾರಕ್ಕೂ ಹಕ್ಕು, ಜವಾಬ್ದಾರಿ ಇರುತ್ತದೆ. ಪಲಾಯನ ಮಾಡುವ ಅಗತ್ಯವಿಲ್ಲ, ಇನ್ನೆಷ್ಟು ದಿನ ನುಣುಚಿಕೊಳ್ಳುತ್ತೀರಿ’ ಎಂದು ಅವರು ‍ಪ್ರಶ್ನಿಸಿದರು. 

‘ಮಕ್ಕಳಿಗೆ ಭಗವದ್ಗೀತೆ ಕಲಿಸಿ ಎನ್ನುವುದು ಮಹಾನ್ ಅಪರಾಧವೇ?‘

‘ಬೆಂಗಳೂರು ಸೇರಿ ರಾಜ್ಯದಲ್ಲಿ ಮಾದಕ ವಸ್ತುಗಳ ನಶೆಗೆ ಸಿಕ್ಕಿ ಯುವಜನರು ಹಾಳಾಗುತ್ತಿದ್ದಾರೆ. ರಾತ್ರಿಯಿಂದ ಬೆಳಿಗ್ಗೆವರೆಗೂ ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಅನ್ನು ನಿರಂತರವಾಗಿ ಪೂರೈಕೆ ಮಾಡುತ್ತಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿಯಿಂದ ಯುವಕರನ್ನು ಸರಿದಾರಿಗೆ ತರಲು ವಿದ್ಯಾರ್ಥಿ ದಿಸೆಯಿಂದಲೇ ಭಗವದ್ಗೀತೆ ಬೋಧಿಸಬೇಕು ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ?‘ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ‘ಒಳ್ಳೆಯ ಸಮಾಜ ನಿರ್ಮಿಸುವ ಉದ್ದೇಶದಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಭಗವದ್ಗೀತೆ ಕಲಿಸಬೇಕು ಎಂಬುದು ನನ್ನ ಅಭಿಪ್ರಾಯ. ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಇಂಥ ಮನಃಸ್ಥಿತಿಯೇ ಅಪಾಯಕಾರಿ‘ ಎಂದು ಅಭಿಪ್ರಾಯಪಟ್ಟರು. ‘ನಾನೆಂದೂ ಭಗವದ್ಗೀತೆಗೆ ಅಪಮಾನ ಮಾಡಿಲ್ಲ ಮಾಡುವುದೂ ಇಲ್ಲ. ಹಿಂದೊಮ್ಮೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವಾಗ ನಾನು ಭಗವದ್ಗೀತೆ ಬಗ್ಗೆ ಹೇಳಿದ್ದೆ. ಯಾವುದೋ ಒಂದು ವರ್ಗದ ಮಕ್ಕಳಿಗೆ ಕಲಿಸಬೇಕು ಬೋಧಿಸಬೇಕು ಎಂದು ನಾನು ಹೇಳಿಲ್ಲ. ಎಲ್ಲ ಮಕ್ಕಳಿಗೂ ಭಗವದ್ಗೀತೆ ಕಲಿಸಬೇಕು ಎಂದು ಒತ್ತಿ ಹೇಳಿದ್ದೇನೆ. ಇದನ್ನು ಸಚಿವ ಮಹದೇವಪ್ಪ ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ನನ್ನ ಮೇಲೆ ದಾಳಿ ಮಾಡಿದರೆ ಉಪಯೋಗವೇನು?‘ ಎಂದು ಅವರು  ಕೇಳಿದರು.

‘ಡಿಕೆಶಿ ನೀರಿನ ಹೆಜ್ಜೆ; ಅದು ಕಟ್ ಆ್ಯಂಡ್‌ ಪೇಸ್ಟ್!‘

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ʼನೀರಿನ ಹೆಜ್ಜೆʼ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ‘ಯಾರೋ ಬರೆದಿರುವ ಆ ಪುಸ್ತಕ ಕೇವಲ ಕಟ್ ಆ್ಯಂಡ್‌ ಪೇಸ್ಟ್ ಅಷ್ಟೇ. ಬೇರೆ ಯಾವುದೋ ಪುಸ್ತಕದಲ್ಲಿ ಬರೆದಿರುವುದನ್ನೇ ಕತ್ತರಿಸಿ ಈ ಪುಸ್ತಕದಲ್ಲಿ ಅಂಟಿಸಿದ್ದಾರೆ! ನನಗೆ ಈ ಪುಸ್ತಕವನ್ನು ಯಾರೋ ತಂದುಕೊಟ್ಟರು. ಸಾಮಾನ್ಯವಾಗಿ ಯಾವುದೇ ಪುಸ್ತಕವಾದರೂ ಅದನ್ನು ಆಸಕ್ತಿಯಿಂದ ಓದುತ್ತೇನೆ. ಆದರೆ ಈ ಪುಸ್ತಕ ನೋಡಿದಾಗ ಇಲ್ಲಿರುವುದು ಅವರ ಹೆಜ್ಜೆಗಳಲ್ಲ ಯಾರದೋ ಹೆಜ್ಜೆಗಳನ್ನು ನನ್ನ ಹೆಜ್ಜೆಗಳು ಎಂದು ತೋರಿಸುವ ಕಸರತ್ತು ಮಾಡಿದ್ದಾರೆ‘ ಎಂದು ವ್ಯಂಗ್ಯವಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.