ADVERTISEMENT

ಸಿರಾಜ್‌ ಕವನವನ್ನು ಸದನದಲ್ಲೇ ವಾಚಿಸಿದ ಎಚ್‌.ಡಿ ಕುಮಾರಸ್ವಾಮಿ 

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 12:57 IST
Last Updated 19 ಫೆಬ್ರುವರಿ 2020, 12:57 IST
ಸದನದಲ್ಲಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ
ಸದನದಲ್ಲಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ಸಾಹಿತಿ ಸಿರಾಜ್‌ ಬಿಸರಳ್ಳಿ ಅವರು ವಾಚಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕವನವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಸದನದಲ್ಲೇ ವಾಚಿಸಿದ್ದಾರೆ.

ಸದ್ಯ ಈ ಕವನ ವಾಚಿಸಿದ ಕಾರಣಕ್ಕಾಗಿಯೇ ಸಿರಾಜ್‌ ಮತ್ತು ಅದನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡ ಕಾರಣಕ್ಕೇ ರಾಜಾ ಭಕ್ಷಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗುರುವಾರ ಕಲಾಪದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು ಚರ್ಚೆಯೊಂದರಲ್ಲಿ ಮಾತನಾಡುತ್ತಾ, ಸಿರಾಜ್‌ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಿರಾಜ್‌ ಅವರ ಪೂರ್ಣ ಕವನವನ್ನು ಓದಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೂ ಕುಮಾರಸ್ವಾಮಿ ಅವರ ಕವನ ವಾಚನವನ್ನು ತದೇಕಚಿತ್ತದಿಂದ ಆಲಿಸಿದರು.

ADVERTISEMENT

‘ಕವನದಲ್ಲಿ ಆಕ್ಷೇಪಿಸುವಂಥದ್ದು ಏನಿದೆ? ನಿಸಾರ್‌ ಅಹಮದ್‌ ಅವರು ‘ಕುರಿಗಳು ಸಾರ್‌ ಕುರಿಗಳು’ ಬರೆದಿದ್ದು ರಾಜಕಾರಣಿಗಳನ್ನು ಉದ್ದೇಶಿಸಿಯೇ. ಆಗ ಅವರನ್ನು ಬಂಧಿಸಲಾಗಿತ್ತೇ? ಅಡಿಗರು ಹಿಂದೊಂದು ಬಾರಿ ಬರೆದ ಕವನವೊಂದು ಚರ್ಚೆಗೆ ಗುರಿಯಾಗಿತ್ತು. ಆದರೆ, ಈಗ ಸಾಹಿತಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಜಾಮೀನಿಗಾಗಿ ಅಲೆಯುವಂತೆ ಮಾಡಲಾಗಿದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೀ ಯಾವಾಗ ದಾಖಲೆ ನೀಡುತ್ತೀ’ ಎಂಬ ಕವನವನ್ನು ಸಿರಾಜ್‌ ಆನೆಗೊಂದಿ ಉತ್ಸವದಲ್ಲಿ ವಾಚಿಸಿದ್ದರು. ರಾಜಾಭಕ್ಷಿ ಇದನ್ನು ಸಾಮಾಜಿಕ ಜಾಲತಾಣದ ಮೂಲಕ ಬಿತ್ತರಿಸಿದ್ದರು. ಈ ಇಬ್ಬರ ವಿರುದ್ಧ ಬಿಜೆಪಿ ಯುವ ಮೋರ್ಚಾದ ಮುಖಂಡರೊಬ್ಬರು ನೀಡಿದ ದೂರಿನನ್ವಯ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಅವರಿಗೆ ಜಾನೀನು ನಿರಾಕರಣೆಯಾಗಿದೆ. ಇದೇ ಹಿನ್ನೆಲೆಯಲ್ಲಿ ಇಬ್ಬರೂ ಬುಧವಾರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.