ADVERTISEMENT

'ಸಾಲಮನ್ನಾ ಹುಡುಗಾಟಿಕೆ ಅಲ್ಲ': ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 14:29 IST
Last Updated 24 ಡಿಸೆಂಬರ್ 2018, 14:29 IST
   

ಕೊಪ್ಪಳ: ‘ಸಾಲಮನ್ನಾ ಬಗ್ಗೆ ಲಘುವಾಗಿ ಪರಿಗಣಿಸಬೇಡಿ, ಸಾಲಮನ್ನಾ ಹುಡಗಾಟಿಕೆ ಅಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬಾಗಲಕೋಟೆಗೆ ತೆರಳಲು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ತಾಲ್ಲೂಕಿನ ಸಿದ್ದಾಪುರದಲ್ಲಿರುವ ಖಾಸಗಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಾಲ ಮನ್ನಾ ವಿಚಾರದಲ್ಲಿ ಸಂಶಯ ಮೂಡಿಸುವ ಹೇಳಿಕೆಗಳು ಬೇಡ. ಯಾವುದೇ ಇಲಾಖೆಯಲ್ಲಿ ಹಣ ಕಡಿತ ಮಾಡಿ ಸಾಲಮನ್ನಾಕ್ಕೆ ನೀಡಿದ್ದಾರೆ ಎಂದು ಬಿಜೆಪಿ ಅವರು ಅಪಪ್ರಚಾರ ಮಾಡುತ್ತಾರೆ. ಅದಕ್ಕೆ ಕಿವಿ ಕೊಡಬಾರದು. ಸಾಲಮನ್ನಾವನ್ನು ಅತ್ಯಂತ ಗಂಭೀರ ಮತ್ತು ಆದ್ಯತೆಯ ವಿಷಯ ಎಂದು ಪರಿಗಣಿಸಿದ್ದು, ಜನವರಿ ಅಂತ್ಯದೊಳಗೆ ಎಲ್ಲ ರೈತರ ಸಾಲಮನ್ನಾ ಮಾಡಲಾಗಿದೆ’ ಎಂದರು.

ADVERTISEMENT

ಕಳೆದ ಏಳು ತಿಂಗಳಲ್ಲಿ ಐದು ಬಾರಿ ರೈತರ ಸಭೆ ನಡೆಸಿದ್ದೇವೆ ಎಂದರೆ ಸಾಲಮನ್ನಾಕ್ಕೆ ನಮ್ಮ ಆದ್ಯತೆ ಎಷ್ಟು ಇದೆ ಎಂದು ನೀವೆ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸರ್ಕಾರದಲ್ಲಿ ಯಾರೂ ರೈತರ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ದೆಹಲಿಯಲ್ಲಿ ತಮಿಳುನಾಡಿನ ರೈತರು ಬೆತ್ತಲೆ ಪ್ರತಿಭಟನೆ ಮಾಡಿದರೂ ಕೇಂದ್ರ ಸರ್ಕಾರ ಅವರನ್ನು ಮಾತನಾಡಿಸಲಿಲ್ಲ ಎಂದು ಟೀಕಿಸಿದರು.

ಸಾಲಮನ್ನಾ ರಾತ್ರೋರಾತ್ರಿಯಾಗಲ್ಲ: ಇವತ್ತು ₹ 46 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇನೆ. ಅದಕ್ಕೆ ಗೈಡ್ ಲೈನ್ಸ್ ಬೇಡ್ವಾ? ಒಂದೇ ರಾತ್ರಿಯಲ್ಲಿ ಸಮಸ್ಯೆ ಬಗೆಹರಿಯಲ್ಲ. ಉತ್ತರ ಪ್ರದೇಶ ಸರ್ಕಾರ 2017ರಲ್ಲಿಯೇ ಸಾಲಮನ್ನಾಕ್ಕೆ ಆದೇಶ ನೀಡಲಾಗಿತ್ತು. ಆದರೆ ಈವರೆಗೆ ಶೇ 40ರಷ್ಟು ಗುರಿ ತಲುಪಿಲ್ಲ ಎಂದರು.

ರೈತರ ಹಣ ತಿನ್ನುವುದು ಮಹಾಪಾಪ: ಯಲಬುರ್ಗಾ ಪಿಎಲ್‌ಡಿ ಬ್ಯಾಂಕಿನಲ್ಲಿ ರೈತರ ಹೆಸರಿನಲ್ಲಿ ಹಣ ದುರಪಯೋಗಮಾಡಿಕೊಂಡ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ರೈತರ ಹಣ ತಿನ್ನುವುದು ಮಹಾಪಾಪ. ಸಹಕಾರಿ ಕ್ಷೇತ್ರದಲ್ಲಿ ವ್ಯವಸ್ಥಾಪಕರು ಮತ್ತು ಆಡಳಿತ ಮಂಡಳಿ ಸದಸ್ಯರು ರೈತರ, ಸಂಬಂಧಿಕರ ಹೆಸರಿನಲ್ಲಿ ಸಾಲ ಪಡೆದು ಮಜಾ ಮಾಡಿದ್ದಾರೆ. ಇದು ರಾಜ್ಯದ ವಿವಿಧೆಡೆ ನಡೆದುಕೊಂಡು ಬಂದಿದೆ. ಈಗ ಸಾಲಮನ್ನಾ ಆಗುತ್ತದೆ ಎಂಬ ಖುಷಿಯಲ್ಲಿ ಇದ್ದಾರೆ. ಆದರೂ ಅದನ್ನು ಪರಿಶೀಲನೆ ನಡೆಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆ ಖಚಿತ ಎಂದು ಹೇಳಿದರು.

ಮರಳುಗಾರಿಕೆ ಗೊಂದಲ ಬಿಜೆಪಿ ಕೊಡುಗೆ: ಬಿಜೆಪಿ ಸರ್ಕಾರದಲ್ಲಿ ಇದ್ದಾಗ ಸಮಗ್ರ ಮರಳು ನೀತಿ ತರುತ್ತೇವೆ ಎಂದು ಹೇಳಿದ್ದರು. ಆದರೆ ಅವರ ಆ ಕೆಲಸ ಮಾಡಲಿಲ್ಲ. ಆರಂಭದಿಂದ ಇಂದಿನವರೆಗೂ ಅದೇ ಸಮಸ್ಯೆ ಇದೆ. ಆದರೆ ವಿರೋಧ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮರಳು ಅಕ್ರಮ ದಂಧೆ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಆರಂಭವಾಗಿಲ್ಲ. ಅಧಿಕಾರಿಗಳ,ಜನಪ್ರತಿನಿಧಿಗಳ ಮಟ್ಟದಲ್ಲಿ ಈ ದಂಧೆ ನಡೆಯುತ್ತಿದೆ. ಇದನ್ನು ನಿಯಂತ್ರಣ ಮಾಡೋದು ಕಷ್ಟ ಅಂತ ಒಪ್ಪಿಕೊಂಡರು.

ಮರಳು ಜನಸಾಮಾನ್ಯರಿಗೆ ಸರಳವಾಗಿ ತಲುಪಬೇಕು. ಅದಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಅಧಿಕಾರಕ್ಕೆ ಬಂದನಂತರ ಅಕ್ರಮ ದಂಧೆಗೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ದ್ರಾಕ್ಷಿ ಬೆಳೆಗಾರರು, ದಾಳಿಂಬೆ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಮೈತ್ರಿ ಸರ್ಕಾರದಲ್ಲಿ ಜನತೆಯ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ನನ್ನ ವೈಯಕ್ತಿಕ ಆಸಕ್ತಿಯಾಗಿದೆ ಎಂದರು.

ರಾಯಚೂರಿನಲ್ಲಿ ಅಧಿಕಾರಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಚಾಲಕ, ಮಾಲೀಕನನ್ನು ಬಂಧಿಲಾಗಿದೆ. ಎಷ್ಟೇ ಪ್ರಭಾವಿಗಳಿದ್ದರೂ ತನಿಖೆ ನಡೆಸಿ ಅವರಿಗೆ ಶಿಕ್ಷೆ ನೀಡುತ್ತೇವೆ. ಯಾರನ್ನು ರಕ್ಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೊಪ್ಪಳದ ಬಗ್ಗೆ ನೀವು ಹಗುರವಾಗಿ ಮಾತನಾಡಿದ್ದಿರಿ, ಅದೆಲ್ಲೊ ಕೊಪ್ಪಳ ಎಂದು ಈಗ ಕೊಪ್ಪಳಕ್ಕೆ ಬಂದಿದ್ದು ಏಕೆ ಎಂಬ ಪ್ರಶ್ನೆಗೆ ನಾನು ಹಾಗೆ ಹೇಳಿಲ್ಲ ಕೊಪ್ಪಳದಲ್ಲಿ ಅದೆಲ್ಲೋ ಕುಳಿತುಕೊಂಡು, ಟೀಕೆ ಮಾಡುತ್ತೀರಿ. ಈಗ ನಾನು ನಿಮಗೆ ನೆನಪಿಗಿದ್ದೇನೆಯೇ? ನನಗೆ ಮತ ನೀಡಿದ್ದರೆ ಈ ಅತಂತ್ರ ಪರಿಸ್ಥಿತಿ ಬರುತ್ತಿತ್ತೇ' ಎಂದು ಹೇಳಿದ್ದೆ ಅದನ್ನು ತಿರುಚಿ ದೊಡ್ಡದು ಮಾಡಲಾಗಿದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಸ್ಪಷ್ಟಪಡಿಸಿದರು.

ಅರು ಜಿಲ್ಲೆಗಳ ಮುಖ್ಯಮಂತ್ರಿ ಎಂದು ಟೀಕಿಸಲಾಗುತ್ತಿದೆ ಎಂಬ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಅಂತ ನೂರು ಬಾರಿ ಹೇಳಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ರಾಜ್ಯ ಕಾರ್ಯದರ್ಶಿ ಕೆ.ಎಂ.ಸಯ್ಯದ್, ವಕ್ತಾರ ಮೌನೇಶ ವಡ್ಡಟ್ಟಿ, ಅಮರೇಗೌಡ ಪಾಟೀಲ, ಪ್ರದೀಪಗೌಡ ಮಾಲಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.