ADVERTISEMENT

ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್‌.ಡಿ. ಕುಮಾರಸ್ವಾಮಿ

ತಂಬಾಕು ಮಂಡಳಿ, ಖಾಸಗಿ ಕಂಪನಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 9:47 IST
Last Updated 2 ಮಾರ್ಚ್ 2026, 9:47 IST
<div class="paragraphs"><p>ತಂಬಾಕು ಮಂಡಳಿ, ಖಾಸಗಿ ಕಂಪನಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ ನಡೆಸಿದರು.</p></div>

ತಂಬಾಕು ಮಂಡಳಿ, ಖಾಸಗಿ ಕಂಪನಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ ನಡೆಸಿದರು.

   

ಮೈಸೂರು: ‘ರಾಜ್ಯದ ತಂಬಾಕು ಮಾರುಕಟ್ಟೆಗಳಲ್ಲಿ ರೈತರಿಂದ ಹಿಂದಿನ ಸರಾಸರಿ ಅಥವಾ ಅದಕ್ಕಿಂತ ಹೆಚ್ಚು ಬೆಲೆಗೆ ಉತ್ಪನ್ನ ಖರೀದಿಸಬೇಕು. ತಂಬಾಕು ಮಂಡಳಿಯು ಹರಾಜು ಪ್ರಕ್ರಿಯೆ ಮೇಲೆ ನಿಗಾ ವಹಿಸಬೇಕು’ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದರು.

ಕೇಂದ್ರ ತಂಬಾಕು ಮಂಡಳಿಯು ಸೋಮವಾರ ಇಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗೂ ಪ್ರಮುಖ ವರ್ತಕರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ ತಂಬಾಕು ಉತ್ಪನ್ನಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಕುರಿತು ದೂರುಗಳಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರೆ ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಆದರೆ ತೆರಿಗೆಯ ನೆಪದಲ್ಲಿ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಿ’ ಎಂದು ಸೂಚಿಸಿದರು.

ADVERTISEMENT

ಐಟಿಸಿ ಕಂಪನಿ ಹಿರಿಯ ಅಧಿಕಾರಿ ರವಿ ‘ ತಂಬಾಕು ಉತ್ಪನ್ನಗಳಿಗೆ ವಿಧಿಸುತ್ತಿದ್ದ ಜಿಎಸ್‌ಟಿಯನ್ನು ಕೇಂದ್ರವು ಶೇ 18ರಿಂದ ಶೇ 40ಕ್ಕೆ ಏರಿಸಿದೆ. ಸಿಗರೇಟುಗಳ ಮೇಲಿನ ತೆರಿಗೆಯು ದುಪ್ಪಟ್ಟಾಗಿದ್ದು, ಪ್ರತಿ ಸಿಗರೇಟಿನಬೆಲೆ ₹6–7 ಜಾಸ್ತಿ ಆಗಿದೆ. ಹೀಗಾಗಿ ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿದ್ದು, ನಾವು ನಿಗದಿತ ಪ್ರಮಾಣಕ್ಕಿಂತ ಕಡಿಮೆ ತಂಬಾಕನ್ನು ಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ’ ಎಂದರು.

ಮೈಸೂರು–ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ‘ ರಾಜ್ಯದಲ್ಲಿ ಈ ವರ್ಷ 8.5 ಕೋಟಿ ಕೆ.ಜಿ.ಯಷ್ಟು ತಂಬಾಕು ಬೆಳೆದಿದ್ದು, ಇದರಲ್ಲಿ 4 ಕೋಟಿ ಕೆ.ಜಿ.ಯಷ್ಟು ಉತ್ಪನ್ನ ಈಗಾಗಲೇ ಕಡಿಮೆ ಬೆಲೆಗೆ ಹರಾಜಾಗಿದೆ. ಉಳಿದ ಉತ್ಪನ್ನವನ್ನು ಹರಾಜು ಆರಂಭವಾದ ದಿನದ ಸರಾಸರಿ ಅಥವಾ ಅದಕ್ಕಿಂತ ಹೆಚ್ಚು ಬೆಲೆಗೆ ಖರೀದಿಸಿ’ ಎಂದು ಐಟಿಸಿ ಕಂಪನಿ ಪ್ರತಿನಿಧಿಗಳಿಗೆ ಹೇಳಿದರು.

ಎಫ್‌ಡಿಎಗೆ ಒಲವು:

‘ಮೈಸೂರು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಐಟಿಸಿ ಕಂಪನಿಯು ಏಕಸ್ವಾಮ್ಯ ಸಾಧಿಸಿದ್ದು, ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ತಂಬಾಕಿಗೆ ಸ್ಪರ್ಧಾತ್ಮಕ ದರ ಒದಗಿಸುವ ಸಲುವಾಗಿ ಎಫ್‌ಡಿಎ ಮೂಲಕ ವಿದೇಶಿ ಕಂಪನಿಗಳೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಒತ್ತಾಯಿಸಿದರು. ಸಭೆಯಲ್ಲಿದ್ದ ಇತರ ಜನಪ್ರತಿನಿಧಿಗಳೂ ಇದಕ್ಕೆ ಸಹಮತ ಸೂಚಿಸಿದರು. ಈ ಬಗ್ಗೆ ಪರಿಶೀಲಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ತಂಬಾಕು ಮಂಡಳಿ ಅಧಿಕಾರಿಗಳು ಭರವಸೆ ನೀಡಿದರು.

ಚಾಮರಾಜನಗರ ಸಂಸದ ಸುನಿಲ್‌ ಬೋಸ್, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ರವಿಶಂಕರ್, ವಿಧಾನ ಪರಿಷತ್‌ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.