ADVERTISEMENT

ಒಗ್ಗಟ್ಟಿನ ಹೋರಾಟ ಇಲ್ಲವಾದರೆ 'ಮೇಕೆದಾಟು' ಸಹ ವ್ಯಾಜ್ಯವಾಗಿ ಉಳಿಯಲಿದೆ: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2021, 8:31 IST
Last Updated 20 ಜುಲೈ 2021, 8:31 IST
ಮೇಕೆದಾಟು ಪ್ರದೇಶ– ಸಂಗ್ರಹ ಚಿತ್ರ
ಮೇಕೆದಾಟು ಪ್ರದೇಶ– ಸಂಗ್ರಹ ಚಿತ್ರ   

ಬೆಂಗಳೂರು: ಮೇಕೆದಾಟು ಯೋಜನೆಯ ಸಂಬಂಧ ಕರ್ನಾಟಕ ಸರ್ಕಾರವು ಸಾಂಘಿಕ ಹೋರಾಟ ನಡೆಸದಿದ್ದರೆ, 'ಕಾವೇರಿ ನೀರಿನ ವ್ಯಾಜ್ಯದಂತೆಯೇ' ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಾಣ ಮಾಡುವುದೂ ಸಹ ಒಂದು ವ್ಯಾಜ್ಯವಾಗಿ ಉಳಿದು ಹೋಗಲಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕಣಿವೆಯ ನೀರಿನ ಬಳಕೆಗಾಗಿ ಕರ್ನಾಟಕದ ಮೇಕೆದಾಟು ಮತ್ತು ಮಾರ್ಕಂಡೇಯ ಯೋಜನೆಗಳನ್ನು ವಿರೋಧಿಸಿ ಈಗಾಗಲೇ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಮೇಕೆದಾಟು ಯೋಜನೆಗೆ ಪರಿಸರ ಅನುಮತಿ ನೀಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. 'ಮೇಕೆದಾಟು ಯೋಜನೆಯನ್ನು ಮುಂದುವರಿಸಲು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಜಲಶಕ್ತಿ ಸಚಿವರು ತಮಿಳುನಾಡಿಗೆ ಭರವಸೆ ನೀಡಿದ್ದಾರೆ' ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

ಈ ಬೆಳವಣಿಗೆಯ ನಡುವೆ, ಕಾವೇರಿಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ 45 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿರುವ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಕರ್ನಾಟಕ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರದ ನಿಧಾನ ಗತಿಯ ಧೋರಣೆಯ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ಮಂಗಳವಾರ ಸರಣಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಮಿಳುನಾಡು ಸರ್ಕಾರ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಕುಮಾರಸ್ವಾಮಿ, 'ಯೋಜನೆ ವಿಚಾರದಲ್ಲಿ ಕೇಂದ್ರವು ಕರ್ನಾಟಕಕ್ಕೆ ಅಭಯ ನೀಡಿದೆ ಎಂಬ ಸಿಎಂ, ಬಿಜೆಪಿ ನಾಯಕರ ಹೇಳಿಕೆಗಳು ಸುಳ್ಳೇ? ಕೇಂದ್ರ–ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಆಗುವ ಲಾಭ ಇದೇನಾ?' ಎಂದಿದ್ದಾರೆ.

'ಮೇಕೆದಾಟಿನ ಡ್ಯಾಂನಿಂದ ತಮಿಳುನಾಡಿಗೆ ಯಾವ ನಷ್ಟವೂ ಇಲ್ಲ. ಆದರೂ ಡ್ಯಾಂ ನಿರ್ಮಾಣ ಆಗದಂತೆ ತಡೆಯಲು ಶತಪ್ರಯತ್ನ ಮಾಡುತ್ತಿದೆ. ಸರ್ವಪಕ್ಷ ಸಭೆ ಮಾಡಿ ಮುಂದಿನ ಕಾರ್ಯತಂತ್ರ ರೂಪಿಸಿದೆ, ಪ್ರಧಾನಿ, ಸಚಿವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಒತ್ತಡ ಹಾಕಿದೆ. ಆದರೆ, ಯೋಜನೆಯಿಂದ ಅನುಕೂಲ ಪಡೆಯಲಿರುವ ರಾಜ್ಯ ಸರ್ಕಾರ ಈವರೆಗೆ ಏನೇನು ಮಾಡಿದೆ?' ಎಂದು ಕೇಳಿದ್ದಾರೆ.

'ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರ ತನ್ನಿಷ್ಟದಂತೆ ನಡೆದುಕೊಳ್ಳುವುದನ್ನು ಬಿಟ್ಟು ಎಲ್ಲರ ಅಭಿಪ್ರಾಯ ಸಂಗ್ರಹಿಸಲಿ. ಕಗ್ಗಂಟಾಗುತ್ತಿರುವ ಈ ಯೋಜನೆಯನ್ನು ದಕ್ಕಿಸಿಕೊಳ್ಳಲು ಸಾಂಘಿಕವಾಗಿ ಹೋರಾಡಬೇಕು.' ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.