
ಬೆಂಗಳೂರು: ಮನೆಕೆಲಸದ ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಅಪರಾಧ ಪರಿಗಣಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದರೆ ‘ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವನ್ನು ಪರಿಗಣಿಸಿ ನ್ಯಾಯಿಕ ವಿಚಾರಣೆ ನಡೆಸಿ’ ಎಂದು ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.
‘ನನ್ನ ವಿರುದ್ಧ ಹಾಸನ ಜಿಲ್ಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ ‘ದೂರಿನಲ್ಲಿನ ಆರೋಪಗಳು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354ಎ ಅಡಿ ಬರುತ್ತವೆ. ಆದರೆ ಇಲ್ಲಿ 354 ಅನ್ವಯ ಆಗುವುದಿಲ್ಲ. ಸಂತ್ರಸ್ತೆಯ ಘನತೆಗೆ ಹಾನಿ ಮಾಡುವ ಉದ್ದೇಶವನ್ನು ಇದು ತೋರುವುದಿಲ್ಲ. ಆದರೆ ಲೈಂಗಿಕ ದೌರ್ಜನ್ಯವಾಗುತ್ತದೆ. ಅಗತ್ಯವಿದ್ದರೆ ಈ ಅಭಿಪ್ರಾಯವನ್ನು ಪ್ರಶ್ನಿಸಬಹುದು’ ಎಂದು ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರಿಗೆ ಸೂಚಿಸಿತು.
‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354ರ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಸಂಜ್ಞೇಯ ಅಪರಾಧ ಪರಿಣಿಸಿರುವುದನ್ನು ರದ್ದುಗೊಳಿಸಿತು. ‘ದೂರು ದಾಖಲು ಮಾಡುವಲ್ಲಿನ ವಿಳಂಬವನ್ನು ಮೀರಿ ಐಪಿಸಿ ಸೆಕ್ಷನ್ 354ಎ (ಲೈಂಗಿಕ ದೌರ್ಜನ್ಯ) ಅಡಿ ಸೂಕ್ತ ಆದೇಶ ಹೊರಡಿಸುವುದು ಉಚಿತವೋ ಹೇಗೆ ಎಂಬುದನ್ನು ನಿರ್ಣಯಿಸಿ’ ಎಂದು ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಮರಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.