ADVERTISEMENT

ಬಾಣಂತಿಯರ ಸಾವು: ಸಚಿವರ ವಜಾಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ: ಅಶ್ವತ್ಥನಾರಾಯಣ

ಬಾಣಂತಿಯರ ಸರಣಿ ಸಾವು ಪ್ರಕರಣ * ಡಾ.ಅಶ್ವತ್ಥನಾರಾಯಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 15:22 IST
Last Updated 18 ಡಿಸೆಂಬರ್ 2024, 15:22 IST
<div class="paragraphs"><p>ಡಾ.ಸಿ.ಎನ್.ಅಶ್ವತ್ಥನಾರಾಯಣ</p></div>

ಡಾ.ಸಿ.ಎನ್.ಅಶ್ವತ್ಥನಾರಾಯಣ

   

ಸುವರ್ಣ ವಿಧಾನಸೌಧ (ಬೆಳಗಾವಿ): ಬಳ್ಳಾರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವಿಗೆ ಸಂಬಂಧಿಸಿದಂತೆ ಆರೋಗ್ಯ ಸಚಿವರನ್ನು ವಜಾಗೊಳಿಸಿ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಬಾಣಂತಿಯರ ಸರಣಿ ಸಾವಿನ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅವರು, ಈ ಸರಣಿ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಯಾಗಿದ್ದು, ಇದೊಂದು ಕೊಲೆಗಡುಕ ಸರ್ಕಾರ ಎಂದರು.

ADVERTISEMENT

ರಾಜ್ಯದಲ್ಲಿ ಬಾಣಂತಿಯರ ಸಾವು ಸರಿಯಾಗಿ ವರದಿಯಾಗುತ್ತಿಲ್ಲ. ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಬಾಣಂತಿಯರ ಆರೋಗ್ಯ ಸ್ಥಿತಿ ಹದೆಗಟ್ಟಾಗ ತಕ್ಷಣವೇ ಐಸಿಯುಗೆ ಏಕೆ ಹಾಕಲಿಲ್ಲ. ಏಕೆಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯುಗಳು ಮತ್ತು ಟ್ರಾಮಾ ಕೇರ್‌ ಕೇಂದ್ರಗಳು ಮುಚ್ಚಿ ಹೋಗಿವೆ ಎಂದು ದೂರಿದರು.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಗತ್ಯವಾಗಿ ಇರಬೇಕಾದ 761 ಔಷಧಗಳ ಪೈಕಿ  253 ಔಷಧಿಗಳು ಲಭ್ಯವಿದ್ದು, ಉಳಿದ 508 ಔಷಧಿಗಳು ಲಭ್ಯವಿಲ್ಲ. ಬಾಣಂತಿಯರಿಗೆ ಬಳಿಸಿದ ಔಷಧಿಯ ಒಟ್ಟು 22 ಬ್ಯಾಚ್‌ಗಳನ್ನು ಕೇಂದ್ರ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದರಲ್ಲಿ 4 ಬ್ಯಾಚ್‌ಗಳು ಮಾತ್ರ ಬಳಕೆ ಯೋಗ್ಯವೆಂದು ಹೇಳಿದ್ದು, ಉಳಿದವು ಬಳಕೆಗೆ ಯೋಗ್ಯವಿಲ್ಲ ಎಂದು ತಿಳಿಸಿದೆ. ಪಶ್ಚಿಮಬಂಗಾ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯ ಔಷಧ ಬಳಕೆಗೆ ಯೋಗ್ಯವಲ್ಲ ಎಂದು ಪ್ರಯೋಗಾಲಯ ಮಾರ್ಚ್‌ನಲ್ಲಿ ವರದಿ ನೀಡಿದೆ. ಕಪ್ಪು ಪಟ್ಟಿಗೆ ಸೇರಿಸಿದ್ದರೂ ಆ ಔಷಧ ಬಳಕೆ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿದರು.

ನ್ಯಾಯಾಂಗ ತನಿಖೆಗೆ ಅಶೋಕ ಆಗ್ರಹ

ಬಳ್ಳಾರಿ ಮತ್ತು ಇತರ ಜಿಲ್ಲೆಗಳಲ್ಲಿ ನಡೆದಿರುವ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ರಾಜ್ಯದ ಈ ಪ್ರಕರಣ ಬೆಚ್ಚಿ ಬೀಳಿಸುವಂತಹದ್ದು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ರಾಯಚೂರು ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ಸಚಿವರಿಗಂತೂ ಕಾಳಜಿಯೇ ಇಲ್ಲ ಎಂದು ಟೀಕಿಸಿದರು.

ದಾವಣಗೆರೆಯಲ್ಲಿ 28, ರಾಯಚೂರಿನಲ್ಲಿ 10, ಚಿತ್ರದುರ್ಗದಲ್ಲಿ ಒಬ್ಬ ಬಾಣಂತಿ ಸಾವಿಗೀಡಾಗಿದ್ದಾರೆ. ಅಷ್ಟೇ ಅಲ್ಲ, ಸತ್ತ ಬಾಣಂತಿಯರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಕೊಟ್ಟರು. ವಯನಾಡಿನಲ್ಲಿ ಆನೆ ತುಳಿತಕ್ಕೆ ಸಿಕ್ಕ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡಿದ್ದಾರೆ. ಇದು ಸರ್ಕಾರದ ಆದ್ಯತೆ ಎಂದು ಅಶೋಕ ಹರಿಹಾಯ್ದರು.

ಈ ಸರಣಿ ಸಾವಿನ ಪ್ರಕರಣದ ಬಳಿಕ ಸರ್ಕಾರಿ ಆಸ್ಪತ್ರೆಗೆ ಹೋಗುವ ಗರ್ಭಿಣಿಯರ ಪೈಕಿ ಶೇ 50ರಷ್ಟು ಇಳಿಕೆಯಾಗಿದೆ ಎಂದು ಅಶೋಕ ಹೇಳಿದಾಗ, ತಕರಾರು ಎತ್ತಿದ ಕಾಂಗ್ರೆಸ್‌ನ ಕೋನರಡ್ಡಿ, ‘ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬೇಡಿ. ಜನ ಹೋಗುವುದಿಲ್ಲ’ ಎಂದರು.

ಈ ವಿಚಾರವಾಗಿ ಆಡಳಿತ ಮತ್ತು ವಿರೋಧಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ, ಅಶೋಕ ಅವರು ಹೇಳಿದ್ದರಲ್ಲಿ ತಪ್ಪಿಲ್ಲ. ಅವರು ವಾಸ್ತವ ಸಂಗತಿಯನ್ನೇ ಹೇಳಿದ್ದಾರೆ. ಈ ಬಗ್ಗೆ ಸಚಿವ ದಿನೇಶ್ ಅವರು ವಿಧಾನ ಪರಿಷತ್ತಿನಲ್ಲಿ ಇನ್ನೂ ಖಾರವಾಗಿ ಮಾತನಾಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.