ADVERTISEMENT

ಆರೋಗ್ಯ ವಿಮೆಗೂ ಮೊದಲಿನ ಮಾಹಿತಿ ಅಗತ್ಯ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 21:00 IST
Last Updated 28 ಅಕ್ಟೋಬರ್ 2022, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿಮೆ ಹೊಂದಿದವರು ತಮ್ಮ ಅನಾರೋಗ್ಯದ ಮಾಹಿತಿಯನ್ನು ವಿಮಾ ಕಂಪನಿಗೆ ಮುಂಚಿತವಾಗಿಯೇ ನೀಡಬೇಕು. ಇದು ಅವರ ಕರ್ತವ್ಯ ಕೂಡಾ. ಹಾಗೊಂದು ವೇಳೆ ಮಾಹಿತಿಯನ್ನು ನೀಡದೇ ಇದ್ದಾಗ ವಿಮಾ ಕಂಪನಿ ಪಾಲಿಸಿಯನ್ನು ನಿರಾಕರಿಸಬಹುದು’ ಎಂದು ಹೈಕೋರ್ಟ್‌ ಆದೇಶಿಸಿದೆ.

ನಗರದ ದಂಪತಿ ವಿಮಾ ಒಂಬುಡ್ಸ್‌ಮನ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಮೆಡಿಕ್ಲೈಮ್‌ ಪಾಲಿಸಿ ಎನ್ನುವುದು ಒಂದು ಬಗೆಯ ಒಪ್ಪಂದ. ಆ ಒಪ್ಪಂದ ವಿಶ್ವಾಸದ ತಳಹದಿಯ ಮೇಲೆ ನಿಂತಿರುತ್ತದೆ.ಪಾಲಿಸಿ ಪಡೆದವರಿಗೆ ಮೊದಲೇ ಅನಾರೋಗ್ಯ ಇತ್ತೆಂಬ ಅಂಶದ ಆಧಾರದಲ್ಲಿ ಕಂಪನಿ ಪಾಲಿಸಿಯನ್ನು ನಿರಾಕರಿಸಿದರೆ ಅದರಲ್ಲಿ ದೋಷ ಹುಡುಕಲಾಗದು‘ ಎಂದು ತಿಳಿಸಿದೆ.

ಪ್ರಕರಣವೇನು?: ಅರ್ಜಿದಾರರು 2017ರ ಏಪ್ರಿಲ್ 29ರಂದು ಅನಾರೋಗ್ಯಗಳಿಗೆ ವಿಮಾ ಸೌಲಭ್ಯ ಒದಗಿಸುವ ‘ಹೋಂ ಸುರಕ್ಷಾ ಪ್ಲಸ್‌’ ಪಾಲಿಸಿ ಮಾಡಿಸಿದ್ದರು. 2020ರ ಆಗಸ್ಟ್‌ 10ರಂದು ಮಲ್ಟಿಪಲ್‌ ಸ್ಕೆಲಿರೊಸಿಸ್‌ನಿಂದ ಬಳಲುತ್ತಿರುವುದಾಗಿ ವೈದ್ಯರಿಂದ ಚಿಕಿತ್ಸೆ ಪಡೆದು, ಆ ವೆಚ್ಚದ ಮರು ಪಾವತಿಗೆ ಹಕ್ಕು ಮಂಡಿಸಿದ್ದರು.

ADVERTISEMENT

ವಿಮಾ ಕಂಪನಿ ಇದನ್ನು ಪರಿಶೀಲಿಸಿದಾಗ ದಂಪತಿಗೆ ಈ ಕಾಯಿಲೆ ವಿಮೆ ಮಾಡಿಸುವ ಮುನ್ನವೇ ಇದ್ದುದು ಕಂಡು ಬಂದ ಕಾರಣ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದಂಪತಿ ವಿಮಾ ಒಂಬುಡ್ಸಮನ್‌ಗೆ ದೂರು ಸಲ್ಲಿಸಿ, ಕಂಪನಿಯಿಂದ ₹ 28 ಲಕ್ಷ ಕೊಡಿಸುವಂತೆ ಮನವಿ ಮಾಡಿದ್ದರು. ದಾಖಲೆ ಪರಿಶೀಲಿಸಿದ ಒಂಬುಡ್ಸಮನ್‌ ದಂಪತಿಯ ಮನವಿಯನ್ನು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.