
ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ಶುಕ್ರವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳಿಗೆ ಹಸಿರು ನಿಶಾನೆ ತೋರಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಾಲ್ಗೊಂಡರು
ಬೆಳಗಾವಿ: ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಸಂಪರ್ಕರಹಿತ, ದುರ್ಗಮ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮನೆಯ ಬಾಗಿಲಲ್ಲೇ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲ್ಲಿ ಹೇಳಿದರು.
ಸಮಾಜದ ಪ್ರತಿಯೊಬ್ಬರಿಗೂ ಗುಣಮಟ್ಟ ಆರೋಗ್ಯ ಸೇವೆ ಕಲ್ಪಿಸುವುದು ಇದರ ಉದ್ದೇಶ ಎಂದರು. ಸುವರ್ಣ ವಿಧಾನಸೌಧದ ಎದುರು ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಸೇವೆ ಉದ್ಘಾಟನೆ ವೇಳೆ ಈ ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಚಾರಿ ಆರೋಗ್ಯ ಘಟಕಗಳಿಗೆ ಹಸಿರು ನಿಶಾನೆ ತೋರಿದರು.
‘ಪ್ರತಿ ಸಂಚಾರಿ ಆರೋಗ್ಯ ಘಟಕಕ್ಕೆ ತಿಂಗಳಿಗೆ ₹1.92 ಲಕ್ಷ ಮೊತ್ತವನ್ನು ವ್ಯಯಿಸಲಾಗುವುದು. ಉತ್ತರ ಕರ್ನಾಟಕ ಭಾಗಕ್ಕೆ ಒಟ್ಟು 41 ವಾಹನಗಳನ್ನು ಈಗಾಗಲೇ ನೀಡಿದ್ದೇವೆ’ ಎಂದು ಸಚಿವರು ತಿಳಿಸಿದರು.
‘ಈಗ 81 ಘಟಕಗಳನ್ನು ಸೇವೆಗೆ ಸಮರ್ಪಿಸಿದ್ದೇವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 49 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನದಡಿಯಲ್ಲಿ 32 ಸಂಚಾರಿ ಆರೋಗ್ಯ ಘಟಕಗಳನ್ನು ಪರಿಶಿಷ್ಟ ಜಾತಿ, ಪಂಗಡ ಮೀಸಲು ಕ್ಷೇತ್ರಗಳಲ್ಲಿ ಸೇವೆಗೆ ಒದಗಿಸಲಾಗುವುದು. ಇವುಗಳ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಗಳು, ಸಮುದಾಯ ಆರೈಕೆ ಸೇವೆಗಳನ್ನು ಒದಗಿಸಲಾಗುವುದು’ ಎಂದರು.
‘ಘಟಕಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ವಾಹನವನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆದಿದ್ದೇವೆ. ಪ್ರತಿ ವಾಹನದಲ್ಲಿ ಒಬ್ಬರು ಎಂಬಿಬಿಎಸ್ ವೈದ್ಯರು, ಶುಶ್ರೂಷಕರು, ತಂತ್ರಜ್ಞರು ಇರುತ್ತಾರೆ. ಮೊದಲೇ ನಿರ್ದಿಷ್ಟ ದಿನಾಂಕ, ಸಮಯ ಪ್ರಕಟಿಸಿ, ಅಲ್ಲಿಗೆ ತೆರಳಿ ಸೇವೆ ಒದಗಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.