ADVERTISEMENT

ಕೋವಿಡ್‌ನಿಂದ ಗುಣಮುಖರಾದ 28 ಲಕ್ಷ ಮಂದಿಗೆ ಕ್ಷಯ ರೋಗ ತಪಾಸಣೆ: ಸಚಿವ ಸುಧಾಕರ್‌

ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿ ಪತ್ತೆಗೆ ‘ಆರೋಗ್ಯ ನಂದನ’ ಕಾರ್ಯಕ್ರಮ ಶೀಘ್ರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 6:37 IST
Last Updated 17 ಆಗಸ್ಟ್ 2021, 6:37 IST
ಡಾ.ಕೆ. ಸುಧಾಕರ್‌
ಡಾ.ಕೆ. ಸುಧಾಕರ್‌   

ಬೆಂಗಳೂರು: ‘ರಾಜ್ಯದಲ್ಲಿರುವ ಒಂದೂವರೆ ಕೋಟಿಗೂ ಹೆಚ್ಚು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಪತ್ತೆ ಮಾಡುವ ಉದ್ದೇಶದಿಂದ ‘ಆರೋಗ್ಯ ನಂದನ’ ಎಂಬ ವಿನೂತನ ಕಾರ್ಯಕ್ರಮಕ್ಕೆ ವಾರದೊಳಗೆ ಚಾಲನೆ ನೀಡಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈ ಕಾರ್ಯಕ್ರಮದ ರೂಪುರೇಷೆ ಸಿದ್ಧವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಯ ನೀಡಿದ ತಕ್ಷಣ ಚಾಲನೆ ನೀಡಲಾಗುವುದು’ ಎಂದರು.

‘ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಪತ್ತೆ ಮಾಡಲು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅದೇ ಕಾರ್ಯಕ್ರಮವನ್ನು ‘ಆರೋಗ್ಯ ನಂದನ’ ಹೆಸರಿನಲ್ಲಿ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ’ ಎಂದೂ ಅವರು ವಿವರಿಸಿದರು.

ADVERTISEMENT

‘ಈ ಕಾರ್ಯಕ್ರಮದಡಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ, ಅಪೌಷ್ಟಿಕತೆ ಇರುವ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಲಾಗುವುದು. ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿವೆ’ ಎಂದು ತಿಳಿಸಿದರು.

ಕೋವಿಡ್‌ ಗುಣಮುಖರಾದವರಿಗೆ ಕ್ಷಯ ರೋಗ ತಪಾಸಣೆ: ‘ಕೋವಿಡ್‌ನಿಂದ ಗುಣಮುಖರಾಗಿರುವ ರಾಜ್ಯದ 28 ಲಕ್ಷ ಜನರನ್ನೂ ಕ್ಷಯ ರೋಗ ತಪಾಸಣೆಗೆ ಒಳಪಡಿಸಲು ವಿಶೇಷ ಅಭಿಯಾನವನ್ನು ಇದೇ 16ರಿಂದ ಆರಂಭಿಸಲಾಗಿದೆ. ಇಡೀ ದೇಶದಲ್ಲಿಯೇ ಇದು ಮೊದಲ ಪ್ರಯತ್ನ’ ಎಂದು ಸುಧಾಕರ್‌ ತಿಳಿಸಿದರು.

‘ಕೋವಿಡ್‌ ಸೋಂಕಿನಿಂದ ಗುಣ ಮುಖರಾಗಿರುವವರಲ್ಲಿ ಸಕ್ರಿಯವಾಗಿರುವ ಕ್ಷಯ ರೋಗ ಪತ್ತೆ ಮಾಡಲು ಈ ಅಭಿಯಾನವನ್ನು ಈ ತಿಂಗಳ 31ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

‘ರಾಜ್ಯದಲ್ಲಿ ಕೋವಿಡ್‌ ಸೋಂಕಿನಿಂದ ಹೊರಬಂದಿರುವ ಅಷ್ಟೂ ಜನರನ್ನು ಕ್ಷಯ ರೋಗ ತಪಾಸಣೆಗೆ ಒಳಪಡಿಸುತ್ತೇವೆ. ಕ್ಷಯ ರೋಗ ಸಾಮಾನ್ಯವಾಗಿ ಶ್ವಾಸಕೋಶದ ಸೋಂಕಿನಿಂದ ಬರುತ್ತದೆ. ಕೋವಿಡ್‌ ಕೂಡಾ ಶ್ವಾಸಕೋಶದ ಸೋಂಕು ರೋಗ. ಯಾರು ಕೋವಿಡ್‌ನಿಂದ ಗುಣಮುಖರಾಗಿದ್ದಾರೊ ಅಂಥವರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕ್ಷಯ ರೋಗ ಕಂಡು ಬಂದಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದ 24 ಮಂದಿಯಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ತಪಾಸಣೆಯನ್ನು ಆಂದೋಲನ ರೀತಿಯಲ್ಲಿ ಹಮ್ಮಿಕೊಂಡಿದ್ದೇವೆ’ ಎಂದರು.

‘ಕ್ಷಯ ರೋಗದ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರಧಾನಿ ಕೂಡಾ ಹೇಳಿದ್ದಾರೆ. 2020– 25ರ ವೇಳೆಗೆ ಕ್ಷಯ ರೋಗ ಮುಕ್ತ ಭಾರತ ಆಗಬೇಕು ಎಂಬ ಬದ್ಧತೆಯನ್ನು ಪ್ರಧಾನಿ ಹೊಂದಿದ್ದಾರೆ. ಜನರು ಆಸಕ್ತಿಯಿಂದ, ಸ್ವಯಂ ಪ್ರೇರಣೆಯಿಂದ ಕ್ಷಯ ರೋಗದ ತಪಾಸಣೆ ಮಾಡಿಸಬೇಕು. ಆ ಮೂಲಕ, ಈ ರೋಗದ ನಿರ್ಮೂಲನಕ್ಕೆ ಮುಂದಾಗಬೇಕು’ ಎಂದು ಅವರು ಮನವಿ ಮಾಡಿದರು.

‘2017ರಲ್ಲಿ ಕ್ಷಯ ರೋಗ ತಪಾಸಣೆಯಲ್ಲಿ 75 ಲಕ್ಷ ಜನರನ್ನು ಗುರುತಿಸಿ, ಆ ಪೈಕಿ ಶೇ 88ರಷ್ಟು ಜನರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಸುಮಾರು 4 ಸಾವಿರ ಜನರಲ್ಲಿ (ಶೇ 3.9) ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ. 2019 ಮತ್ತು 2020ಕ್ಕೆ ಹೋಲಿಸಿದರೆ ಈ ರೋಗದ ಪ್ರಮಾಣ ಕಡಿಮೆ ಕಾಣಿಸಿದ್ದರೂ, ಕೋವಿಡ್‌ನಿಂದ ಕ್ಷಯ ರೋಗದ ತಪಾಸಣೆ ಸಮರ್ಪಕವಾಗಿ ನಡೆಯದಿರುವುದು ಕಾರಣ ಇರಬಹುದು’ ಎಂದರು.

‘2021ರಲ್ಲಿ 1.25 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 79,938 ಜನರನ್ನು ತಪಾಸಣೆ ನಡೆಸಲಾಗಿದ್ದು, ಆ ಪೈಕಿ, 2,714 ಜನರಿಗೆ ಕ್ಷಯ ರೋಗ ಪತ್ತೆ ಆಗಿದೆ’ ಎಂದೂ ಹೇಳಿದರು.

‘ಕ್ಷಯ ರೋಗ ಸಾಂಕ್ರಾಮಿಕ ಅಲ್ಲದಿದ್ದರೂ ರೋಗ ಇರುವ ವ್ಯಕ್ತಿ ಮನೆಯಲ್ಲಿ ವಾಸ ಮಾಡುವುದರಿಂದ ಅಪಾಯ ಇದೆ. ವೃತ್ತಿ ಮಾಡುವ ಜಾಗದಲ್ಲೂ ಸೋಂಕು ತಗಲುವ ಸಾಧ್ಯತೆಗಳಿವೆ. ಹೀಗಾಗಿ, ಎರಡು ವಾರಕ್ಕೂ ಹೆಚ್ಚು ಅವಧಿಯಿಂದ ಕೆಮ್ಮು ಇರುವವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೆಂದು, ಅಂಥ ಕೆಮ್ಮು ಕ್ಷಯ ರೋಗ ಆಗಬೇಕು ಎಂದೇನೂ ಇಲ್ಲ. ರಾತ್ರಿ ವೇಳೆ ಜ್ವರ ಬರುವುದು, ತೂಕ ಕಡಿಮೆ ಆಗುವುದು ಕೂಡಾ ಕ್ಷಯ ರೋಗದ ಲಕ್ಷಣ’ ಎಂದು ಸಚಿವರು ಹೇಳಿದರು.

ಡಿಸೆಂಬರ್‌ ಅಂತ್ಯದೊಳಗೆ ಲಸಿಕೆ: ‘ರಾಜ್ಯದಲ್ಲಿ ಈವರೆಗೆ 3.50 ಕೋಟಿ ಜನರಿಗೆ ಲಸಿಕೆ ಕೊಟ್ಟಿದ್ದೇವೆ. 18 ವರ್ಷ ಮೇಲಿನ ಎಲ್ಲರಿಗೂ ಡಿಸೆಂಬರ್‌ ಅಂತ್ಯದೊಳಗೆ ಲಸಿಕೆ ಕೊಡಲು ತೀರ್ಮಾನಿಸಿದ್ದೇವೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ನಾನು ಕೂಡಾ ಮತ್ತೊಮ್ಮೆ ದೆಹಲಿಗೆ ತೆರಳಿ ಅಗತ್ಯ ಪ್ರಮಾಣದ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ’ ಎಂದರು.

‘ಉತ್ಪಾದನೆಯಾದ ಲಸಿಕೆಯಲ್ಲಿ ಖಾಸಗಿ ವಲಯಕ್ಕೆ ಶೇ 25ರಷ್ಟು ಪೂರೈಕೆ ಆಗುತ್ತಿದೆ. ಹೀಗಾಗಿ, ಔಷಧಿ ತಯಾರಿಸುವ ಎಲ್ಲ ಕಂಪನಿಗಳ ಮುಖ್ಯಸ್ಥರು, ದೊಡ್ಡ ಕೈಗಾರಿಕೆಗಳ ಮುಖ್ಯಸ್ಥರು, ಆಹಾರ ತಯಾರಿಸುವ ಕಂಪನಿಗಳ ಮುಖ್ಯಸ್ಥರ ಸಭೆಯೊಂದನ್ನು ಇವತ್ತು ಕರೆಯಲಾಗಿದೆ. ದೊಡ್ಡ ದೊಡ್ಡ ಕಂಪನಿಯವರು ತಮ್ಮ ಸಿಎಸ್‌ಆರ್‌ ನಿಧಿಯಲ್ಲಿ ಲಸಿಕೆ ಖರೀದಿಸಿ ಸರ್ಕಾರಕ್ಕೆ ಕೊಡುವಂತೆ ಮನವಿ ಮಾಡಲಾಗುವುದು. ಅದೇ ರೀತಿ ಐಟಿ ಬಿಟಿ ಕಂಪನಿಗಳೂ ಸಿಎಸ್‌ಆರ್‌ ನಿಧಿಯನ್ನು ಲಸಿಕೆಗೆ ವ್ಯಯ ಮಾಡುವಂತೆ ಕೋರುತ್ತೇವೆ. ಇದರಿಂದ ಅತ್ಯಂತ ವೇಗವಾಗಿ ಎಲ್ಲರಿಗೂ ಲಸಿಕೆ ಕೊಡಲು ಸಾಧ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.