ಬಳ್ಳಾರಿ: ಆರೋಗ್ಯಸಚಿವ ಬಿ. ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ (95) ಗುರುವಾರ ರಾತ್ರಿ ಮೃತಪಟ್ಟಿದ್ದು, ಶುಕ್ರವಾರ ಬೆಳಗಿನ ಜಾವ ಅಂತ್ಯಸಂಸ್ಕಾರ ನಡೆಯಿತು.
ಕೆಲವು ದಿನಗಳ ಹಿಂದೆ ಶ್ರೀರಾಮುಲು ಜೊತೆಗೆ ತಾಯಿಗೂ ಕೊರೋನಾ ಸೋಂಕು ತಗುಲಿತ್ತು. ಬಳಿಕಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.ಮೂರು ದಿನಗಳ ಹಿಂದೆ ಬಳ್ಳಾರಿಗೆ ಬಂದಿದ್ದರು.
ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಹೆಚ್ಚಿನ ಜನರು ಸೇರಬಹುದು ಎನ್ನುವ ಕಾರಣಕ್ಕೆ ಬೆಳಗಿನ ಜಾವ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಈ ಕುರಿತು ಟ್ವೀಟ್ ಮಾಡಿರುವ ಶ್ರೀರಾಮುಲು ಅವರು, ನನ್ನ ತಾಯಿಯವರಾದ ಹೊನ್ನೂರಮ್ಮ ಅವರು ನಿನ್ನೆ ತಡರಾತ್ರಿ ವಯೋಸಹಜ ಕಾರಣದಿಂದ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇನೆ ಎಂದಿದ್ದಾರೆ.
ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿದ್ದ ಅಮ್ಮ, ಇತ್ತೀಚೆಗಷ್ಟೇ ಕೋವಿಡ್ ಸೋಂಕಿಗೆ ತುತ್ತಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿ ಬಳ್ಳಾರಿಯ ಮನೆಗೆ ಹಿಂದಿರುಗಿದ್ದರು ಎಂದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮಾಡಿ,ಆರೋಗ್ಯ ಸಚಿವ ಶ್ರೀರಾಮುಲು ರವರ ಮಾತೃಶ್ರೀ ರವರು ದೈವಧೀನರಾದ ವಿಷಯ ಕೇಳಿ ಅತೀವ ದುಃಖವಾಗಿದೆ. ಅವರಿಗೆ ಸದ್ಗತಿಯನ್ನು ಕೋರುತ್ತಾ, ಶ್ರೀರಾಮುಲು ಸೇರಿದಂತೆ ಅವರ ಕುಟುಂಬದವರೆಲ್ಲರಿಗೂ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.