ADVERTISEMENT

ಪೋಷಕಾಂಶ ಕೊರತೆ:ಆರೋಗ್ಯದಲ್ಲಿ ಏರುಪೇರು

ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಭಾಗದಲ್ಲಿ ಬಿಪಿಎಲ್ ಕುಟುಂಬದವರನ್ನು ಕಾಡುತ್ತಿರುವ ಸಮಸ್ಯೆ

ಸಂಧ್ಯಾ ಹೆಗಡೆ
Published 30 ಮಾರ್ಚ್ 2019, 19:55 IST
Last Updated 30 ಮಾರ್ಚ್ 2019, 19:55 IST
ಮಲೆನಾಡಿನಲ್ಲಿ ಬತ್ತಿರುವ ಹಳ್ಳದ ಬದಿಯಲ್ಲಿ ಒಣಗಿರುವ ಬಿದಿರು ಹಿಂಡು
ಮಲೆನಾಡಿನಲ್ಲಿ ಬತ್ತಿರುವ ಹಳ್ಳದ ಬದಿಯಲ್ಲಿ ಒಣಗಿರುವ ಬಿದಿರು ಹಿಂಡು   

ಶಿರಸಿ: ಅರಣ್ಯ ನಾಶ ಹಾಗೂ ಜಾಗತಿಕ ಹವಾಮಾನದಲ್ಲಿನ ಬದಲಾವಣೆಯು, ಗ್ರಾಮೀಣ ಪ್ರದೇಶದ ಬಡ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿರುವ ಆತಂಕಕಾರಿ ಸಂಗತಿಯೊಂದು ಅಧ್ಯಯನದ ಮೂಲಕ ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಮಲೆನಾಡು ಹಾಗೂ ಅರೆ ಮಲೆನಾಡು ಭಾಗದಲ್ಲಿ ಚಿಕ್ಕಮಕ್ಕಳಿಂದ ಮಧ್ಯಮ ವಯಸ್ಸಿನ ಬಹುಪಾಲು ಜನರಲ್ಲಿ ಪ್ರೊಟೀನ್, ಪೋಷಕಾಂಶಗಳ ಕೊರತೆ ಇದೆ. ಇದರಿಂದಾಗಿ ಅವರೆಲ್ಲ ರಕ್ತಹೀನತೆ, ಅಶಕ್ತಿ, ಪಚನಕ್ರಿಯೆಯಲ್ಲಿ ವ್ಯತ್ಯಯ, ಮಾಂಸಖಂಡ, ಸಂದುಗಳಲ್ಲಿ ನೋವು, ನಿದ್ರಾಹೀನತೆ, ವಿಪರೀತ ಸುಸ್ತಿನಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ಒಂದು ವರ್ಷದಿಂದ ಈ ಕುರಿತು ಅಧ್ಯಯನ ನಡೆಸುತ್ತಿರುವ ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ.ಕೇಶವ ಕೊರ್ಸೆ.

ಇದಕ್ಕೆ ಕಾರಣ ಹುಡುಕಲು ಹೊರಟ ಅವರಿಗೆ ಅನೇಕ ಕುತೂಹಲದ ವಿಷಯಗಳು ಗಮನಕ್ಕೆ ಬಂದಿವೆ. ಮಳೆ ಕೊರತೆಯಿಂದ ಮಣ್ಣು ಹಾಗೂ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಮೇಲ್ಮಣ್ಣಿನಲ್ಲಿ ಸಾರಜನಕ ಪ್ರಮಾಣ ಕುಂಠಿತವಾಗಿದೆ. ಹಿಂಗಾರಿನಲ್ಲಿ ಬೆಳೆಯುತ್ತಿದ್ದ ಶೇಂಗಾ, ಕಡಲೆ, ಉದ್ದು, ಬವಡೆ ಮೊದಲಾದ ದ್ವಿದಳ ಧಾನ್ಯ ಬೆಳೆಯುವುದನ್ನು ರೈತರು ಬಿಟ್ಟು ಐದಾರು ವರ್ಷಗಳಾಗಿವೆ. ಇವುಗಳ ಸೇವನೆಯೂ ಗಮನಾರ್ಹವಾಗಿ ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಮೊದಲು ಸಾಮಾನ್ಯವಾಗಿದ್ದ ನಾಟಿಕೋಳಿ ಸಾಕಣೆ ಶೇ 95ರಷ್ಟು ನಿಂತಿದೆ. ಹೀಗಾಗಿ ಸಾವಯವ ಮೊಟ್ಟೆ ಅವರ ದೇಹಕ್ಕೆ ಸಿಗುತ್ತಿಲ್ಲ ಎನ್ನುತ್ತಾರೆ ಅವರು.

ADVERTISEMENT

ಮಾರ್ಚ್‌ ಕೊನೆಯವರೆಗೆ ಹರಿಯುತ್ತಿದ್ದ ಹಳ್ಳಕೊಳ್ಳಗಳು ಮಳೆಯ ಕೊರತೆಯಿಂದ ಬೇಗ ಬತ್ತಿ ಹೋಗುತ್ತಿವೆ. ಸ್ಥಳೀಯವಾಗಿ ದೊರೆಯುತ್ತಿದ್ದ ಮುರಗೋಡು, ಪೋಟ್ಲಿ, ತಾರ್ಕ್ಲಿ, ಬಿಳಿಮೀನು, ಕರಿಮೀನು, ಚಿತ್ತಕೂರ್ಲು, ಕರೆಕೊಳಸ ಮೀನುಗಳು, ಏಡಿಗಳು ಸಿಗುತ್ತಿಲ್ಲ. ದೈನಂದಿನ ಆಹಾರದಲ್ಲಿ ಇವುಗಳ ಸೇವನೆಯಿಂದ ಸಿಗುತ್ತಿದ್ದ ಪೋಷ
ಕಾಂಶದಿಂದ ಬಿಪಿಎಲ್ ಕುಟುಂಬದವರು ವಂಚಿತರಾಗಿದ್ದಾರೆ.

ಕೆ.ಜಿ.ಯೊಂದಕ್ಕೆ ₹200ರಿಂದ ₹ 500ರವರೆಗೆ ಮಾರಾಟವಾಗುವ ಮೀನನ್ನು ಖರೀದಿಸುವುದು ಅವರಿಗೆ ಕಷ್ಟ. ಕ್ಯಾಲ್ಸಿಯಂ, ಕಬ್ಬಿಣ, ಪ್ರೊಟೀನ್ ಕೊರತೆ ಅವರನ್ನು ಕಾಡುತ್ತಿದೆ.

ಸರ್ಕಾರ, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡಿ ಸಮಸ್ಯೆ ನಿವಾರಿಸಬಹುದು. ಆದರೆ, ಅದು ತಾತ್ಕಾಲಿಕ. ದೀರ್ಘಕಾಲೀನ ಯೋಜನೆ ರೂಪಿಸುವ ಜತೆಗೆ, ಜಲಾನಯನ ಇಲಾಖೆ, ಜಲಮೂಲ ಪುನಶ್ಚೇತನ ಕಾಮಗಾರಿ ಕೈಗೊಳ್ಳಲು ಗ್ರಾಮ ಪಂಚಾಯ್ತಿಗಳು ಯೋಚಿಸಬೇಕು ಎಂದು ಸಲಹೆ ನೀಡುತ್ತಾರೆ ಕೊರ್ಸೆ.

*ಕಾಡು ಹಾಗೂ ಪರಿಸರ ಸಂರಕ್ಷಣೆ ಈ ವಿಷಯಗಳು ಜನರ ಜೀವನ ಭದ್ರತೆಗೂ ಸಂಬಂಧಿಸಿವೆ ಎಂಬ ವಿವೇಕ ಆಡಳಿತ ವ್ಯವಸ್ಥೆಯಲ್ಲಿ ಮೂಡಬೇಕಾಗಿದೆ

- ಡಾ.ಕೇಶವ ಕೊರ್ಸೆ, ಸಂರಕ್ಷಣಾ ಜೀವಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.