
ಹೃದಯಾಘಾತ
ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಮೇಲಿನ ದೌರ್ಜನ್ಯ (ಅಟ್ರಾಸಿಟಿ) ಪ್ರಕರಣದ ಆರೋಪಿ ಮಹಿಳೆಯೊಬ್ಬರು ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಅ.28 ರಂದು ವಿಚಾರಣೆಗೆ ಹಾಜರಾಗಿದ್ದ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ವಂಟೀರವಾಡ್ಲಪಲ್ಲಿ ಗ್ರಾಮದ ಮಾರಮ್ಮ(58) ನ್ಯಾಯಾಧೀಶರ ವಿಚಾರಣೆ ವೇಳೆ ಕಟಕಟೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾದರು. ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.
‘ನನ್ನ ತಾಯಿ ಮಾರಮ್ಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು’ ಎಂದು ಮಹಿಳೆಯ ಮಗ ವಿ.ಆರ್. ಮಂಜುನಾಥ್ ತಿಳಿಸಿದ್ದಾರೆ.
2024ರ ಜನವರಿಯಲ್ಲಿ ಕೃಷಿ ಜಮೀನು ಗಡಿರೇಖೆ ಗುರುತಿಸುವ ವಿಚಾರದಲ್ಲಿ ಗ್ರಾಮದ ಪರಿಶಿಷ್ಟ ಸಮುದಾಯದ ನರಸಿಂಹಪ್ಪ ಅವರೊಂದಿಗೆ ಮಾರಮ್ಮ ಜಗಳವಾಡಿದ್ದರು. ಮಾರಮ್ಮ ಮತ್ತು ಕುಟುಂಬ ಸದಸ್ಯರ ವಿರುದ್ಧ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ನರಸಿಂಹಪ್ಪ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿತ್ತು.
ಜಿಲ್ಲಾ ಆಸ್ಪತ್ರೆಯಿಂದ ಮಾರಮ್ಮ ಶವವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಸ್ವಗ್ರಾಮಕ್ಕೆ ತರಲಾಯಿತು. ಈ ವೇಳೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಧ್ಯ ಪ್ರವೇಶದಿಂದ ಗೊಂದಲದ ವಾತಾವರಣ ತಿಳಿಯಾಯಿತು.
ಚಾಲಕ ಸಾವು
ರಾಯಚೂರು: ತಾಲ್ಲೂಕಿನ ಗಾರಲದಿನ್ನಿ ಗ್ರಾಮದ ಬಳಿ ಗುರುವಾರ ಹತ್ತಿ ಸಾಗಿಸುತ್ತಿದ್ದ ವೇಳೆ ಬೊಲೆರೊ ಪಿಕ್ಅಪ್ ಗೂಡ್ಸ್ ವಾಹನದ ಚಾಲಕನಿಗೆ ಹೃದಯಾಘಾತವಾಗಿ ವಾಹನ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾರಲದಿನ್ನಿಯ ಚಾಲಕ ನರಸಿಂಹ (33) ಮೃತರು. ಗ್ರಾಮದಲ್ಲಿ ಹತ್ತಿ ತುಂಬಿಕೊಂಡು ರಾಯಚೂರು ಕಡೆ ಬರುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ವಾಹನ ನಿಲುಗಡೆ ಮಾಡುವಷ್ಟರಲ್ಲಿ ಪಲ್ಟಿಯಾಗಿದೆ. ವಾಹನ ರಸ್ತೆ ಬದಿಯ ಹತ್ತಿ ಹೊಲದಲ್ಲಿ ಉರುಳಿ ಬಿದ್ದು ಹತ್ತಿ ಚೆಲ್ಲಾಪಿಲ್ಲಿಯಾಗಿದೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.