ADVERTISEMENT

ರಾಜ್ಯದ ವಿವಿಧೆಡೆ ಮಳೆ: ಸಿಡಿಲಿಗೆ ರೈತ ಬಲಿ

ಗಾಳಿ, ಮಳೆ: ಐದು ಸಾವಿರ ಕೋಳಿ ಸಾವು, ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:33 IST
Last Updated 27 ಏಪ್ರಿಲ್ 2019, 20:33 IST
ಮುಂಡಗೋಡ ತಾಲ್ಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಶನಿವಾರ ಭಾರಿ ಗಾಳಿ, ಮಳೆಗೆ ಫಾರಂನ ಚಾವಣಿ ಬಿದ್ದು ಕೋಳಿಗಳು ಸತ್ತಿರುವುದು.
ಮುಂಡಗೋಡ ತಾಲ್ಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಶನಿವಾರ ಭಾರಿ ಗಾಳಿ, ಮಳೆಗೆ ಫಾರಂನ ಚಾವಣಿ ಬಿದ್ದು ಕೋಳಿಗಳು ಸತ್ತಿರುವುದು.   

ಬೆಂಗಳೂರು/ ಕಾರವಾರ: ರಾಜ್ಯದ ವಿವಿಧೆಡೆ ಶನಿವಾರ ಸಂಜೆ ಮಳೆಯಾಗಿ ತಂಪೆರೆದಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ನೇರಲಗ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ರೈತ ನರಸಪ್ಪ ಜಯವಂತ ಕದಂ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಮಂಡ್ಯ ಜಿಲ್ಲೆಯ ಪಾಂಡವಪುರ, ಚಾಮರಾಜನಗರ ಜಿಲ್ಲೆಯ ಬಂಡೀಪುರ ಜೊತೆಗೆ ಕೊಡಗು, ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.

ಮುಂಡಗೋಡ ತಾಲ್ಲೂಕಿನಅರಶಿಣಗೇರಿ ಗ್ರಾಮದಲ್ಲಿ ಭಾರಿ ಗಾಳಿ, ಮಳೆಗೆ ಕೋಳಿ ಫಾರಂನ ಚಾವಣಿ ಬಿದ್ದು ಅಂದಾಜು 5,000 ಕೋಳಿಗಳು ಸತ್ತಿವೆ. ಸ್ಥಳೀಯ ನಿವಾಸಿ ಹಜರತ್ ಅಲಿತಮ್ಮ ಹೊಲದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಈಅವಘಡದಲ್ಲಿ ಸುಮಾರು ₹ 15 ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ಭಾರಿ ಗಾಳಿಯಿಂದಾಗಿಇದೇ ಗ್ರಾಮದಲ್ಲಿ 15ರಿಂದ 20 ಎಕರೆಗಳಷ್ಟು ಬಾಳೆ ಮತ್ತು ಮಾವಿನ ತೋಟಕ್ಕೆ ಹಾನಿಯಾಗಿದೆ. ಬಾಳೆ ಗಿಡಗಳು ಮುರಿದು ಬಿದ್ದಿವೆ.ಫಸಲಿಗೆ ಬಂದಿದ್ದ ಮಾವು ಬೆಳೆಯೂ ನೆಲಕಚ್ಚಿದೆ. ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಹುನಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಸತ್ತಿದೆ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳ ಮೇಲೆ ಹೊದಿಸಲಾಗಿದ್ದ ಸಿಮೆಂಟ್, ಕಬ್ಬಿಣದ ಶೀಟ್‌ಗಳು ಹಾರಿಹೋಗಿವೆ.

ಹಳಿಯಾಳ ಪಟ್ಟಣದಲ್ಲೂ ಅರ್ಧ ಗಂಟೆ ಗಾಳಿ ಮಳೆಯಾಗಿದ್ದು, ಹತ್ತಾರು ವಿದ್ಯುತ್ ಕಂಬಗಳು, ತೆಂಗಿನ ಮರಗಳು ಮುರಿದುಬಿದ್ದಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರಸುತ್ತಮುತ್ತ ದಟ್ಟವಾದ ಮೋಡ ಕವಿದು, ನಾಲ್ಕಾರು ಹನಿ ತುಂತುರು ಮಳೆಯಾಯಿತು.

ಧಾರವಾಡ, ಬೆಳಗಾವಿ, ಗದಗ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ಸಾಧಾರಣ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಅಕ್ಕಿಆಲೂರು ಹಾಗೂ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.

ಬೆಳಗಾವಿ ಹಾಗೂ ಖಾನಾಪುರ ಸುತ್ತಮುತ್ತಲು ಸುಮಾರು ಅರ್ಧ ಗಂಟೆ ಮಳೆಯಾಗಿದೆ. ಗಾಳಿ ಜೋರಾಗಿ ಬೀಸಿದ್ದರಿಂದ ಹಲವು ಕಡೆ ಮರಗಳು ಧರೆಗುರುಳಿವೆ. ವಿದ್ಯುತ್‌ ಕಂಬಗಳು ಕುಸಿದು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.