ಹಾಸನ ಜಿಲ್ಲೆ ಹೊನ್ನಗೋಡನಹಳ್ಳಿಯಲ್ಲಿ ಅಡಿಕೆ ತೋಟ ಜಲಾವೃತಗೊಂಡಿತ್ತು
ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹಾಸನ, ತುಮಕೂರು,ಚಿತ್ರದುರ್ಗ, ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ತುಮಕೂರು, ಹಾಸನದಲ್ಲಿ ಕೆರೆಗಳು ಕೋಡಿಬಿದ್ದಿವೆ.
ಹಾಸನ ವರದಿ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಅರಕಲಗೂಡು ಪಟ್ಟಣದ ಪೇಟೆ ಮಾಚಗೌಡನಹಳ್ಳಿ ಕೆರೆ ಏರಿಯಲ್ಲಿ ಕೊರಕಲು ಉಂಟಾಗಿ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ 30 ಮನೆಗಳಿಗೆ ಹಾನಿಯಾಗಿದೆ.
ನುಗ್ಗೇಹಳ್ಳಿ ಹೋಬಳಿಯಲ್ಲಿ ಜಂಬೂರುಕೆರೆ ಕೋಡಿ ಬಿದ್ದಿದೆ. ಹೋಬಳಿಯ ಅನೇಕ ಕೆರೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದೆ. ಚನ್ನರಾಯಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಹಿರೀಸಾವೆ ಹೋಬಳಿಯಲ್ಲಿ ಭಾನುವಾರ ರಾತ್ರಿಯಿಡೀ ಜೋರು ಮಳೆಯಾಗಿದೆ. ಬ್ಯಾಡರಹಳ್ಳಿಯಿಂದ ಬಾಳಗಂಚಿ, ಹೊನ್ನಮಾರನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಆಸುಪಾಸಿನ ಜಮೀನು ಜಲಾವೃತವಾಗಿವೆ. ಯಾಳನಹಳ್ಳಿಯಲ್ಲಿ ಮರ ಉರುಳಿ ಮನೆ ಜಖಂಗೊಂಡಿದೆ. ಅರಸೀಕೆರೆ ತಾಲ್ಲೂಕಿನ ಹಲವು ಕೆರೆಗಳು ಕೋಡಿ ಬಿದ್ದಿವೆ.
ಹಿರಿಯೂರು ತಾಲ್ಲೂಕಿನಲ್ಲಿ ಟೊಮೆಟೊ ಬೆಳೆ ಜಲಾವೃತವಾಗಿತ್ತು
ಕೊಡಗು ಜಿಲ್ಲೆಯ ಪೊನ್ನಂಪೇಟೆ, ತಾಲ್ಲೂಕಿನ ಬಾಳೆಲೆ, ನಾಪೋಕ್ಲು, ಹುದಿಕೇರಿಯಲ್ಲಿ ಮಳೆಯಾಗಿದೆ. ಮೈಸೂರು ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ನಸುಕಿನಿಂದ ಬೆಳಿಗ್ಗೆವರೆಗೆ ಜೋರು ಮಳೆಯಾಯಿತು.
ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದು ವಾರದ ಬಿಡುವಿನ ಬಳಿಕ ಸೋಮವಾರ ಬಿರುಸಿನಿಂದ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಅರ್ಧ ಗಂಟೆ ಧಾರಾಕಾರ ಮಳೆ ಸುರಿಯಿತು. ಜಿಲ್ಲೆಯ ಚಿಂಚೋಳಿ, ಕಾಳಗಿ, ಶಹಾಬಾದ್, ಕಮಲಾಪುರ ಸೇರಿದಂತೆ ಹಲವೆಡೆ ಸೋಮವಾರ ಕೆಲಕಾಲ ಉತ್ತಮ ಮಳೆಯಾಗಿದೆ.
ತುಮಕೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಮಾರುಕಟ್ಟೆ ಜಲಾವೃತವಾಗಿದೆ. ದೀಪಾವಳಿ ಹಬ್ಬಕ್ಕೆ ವ್ಯಾಪಾರದ ಭರಾಟೆ ನಿರೀಕ್ಷೆಯಲ್ಲಿದ್ದ ವರ್ತಕರು ಪರದಾಡಿದರು.
ಪಾವಗಡ ತಾಲ್ಲೂಕಿನ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಹುಳಿಯಾರು ಹೋಬಳಿ ವ್ಯಾಪ್ತಿಯ ತೋಟಗಳಿಗೆ ಮಳೆ ನೀರು ಹರಿದಿದೆ. ಕುಣಿಗಲ್ ಭಾಗದಲ್ಲೂ ಉತ್ತಮ ಮಳೆ ಆಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಸಂಕೇನಪುರ ಕೆರೆ ಕೋಡಿ ಹರಿಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.