ADVERTISEMENT

ಕೊಡಗಿನಲ್ಲಿ ಮುಂಗಾರು ಮಳೆ ಅಬ್ಬರ

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 15:41 IST
Last Updated 5 ಜುಲೈ 2019, 15:41 IST
ಕುಸಿಯುವ ಆತಂಕ... ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಕಾಟಕೇರಿ ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು ಆ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನಿಟ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ 
ಕುಸಿಯುವ ಆತಂಕ... ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಕಾಟಕೇರಿ ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು ಆ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನಿಟ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ    

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ನದಿ, ಹಳ್ಳ– ಕೊಳ್ಳಗಳು ಮೈದುಂಬಿಕೊಳ್ಳುತ್ತಿವೆ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮವು ಬಹುತೇಕ ಭರ್ತಿಯಾಗಿದೆ. ಇನ್ನೆರಡು ದಿನ ನಿರಂತರ ಮಳೆಯಾದರೆ ತ್ರಿವೇಣಿ ಸಂಗಮ ಜಲಾವೃತವಾಗಲಿದೆ. ಕಾವೇರಿ ನದಿಯಲ್ಲೂ ನೀರಿನ ಮಟ್ಟ ಏರಿಕೆ ಕಂಡಿದೆ.

ವಿರಾಜಪೇಟೆ, ನಾಪೋಕ್ಲು, ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯಲ್ಲೂ ಬಿಡುವು ಕೊಟ್ಟು ಮಳೆ ಅಬ್ಬರಿಸುತ್ತಿದೆ. ಸೋಮವಾರಪೇಟೆ, ಶನಿವಾರಸಂಜೆ ಸುತ್ತಮುತ್ತ ಸಾಧಾರಣ ಮಳೆ ಸುರಿಯುತ್ತಿದೆ. ಮಡಿಕೇರಿ, ಮುಕ್ಕೋಡ್ಲು, ಹಟ್ಟಿಹೊಳೆ, ಮಾದಾಪುರ ಭಾಗದಲ್ಲೂ ನಿರಂತರ ಮಳೆಯಿಂದ ಹಾರಂಗಿ ಜಲಾಶಯದ ಒಳಹರಿವು 432 ಕ್ಯುಸೆಕ್‌ಗೆ ಏರಿಕೆಯಾಗಿದೆ.

ADVERTISEMENT

ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ.

ಹೆದ್ದಾರಿಯಲ್ಲಿ ಬಿರುಕು: ಕುಸಿಯುವ ಆತಂಕ

ಎರಡು ದಿನ ಸುರಿದ ಮಳೆಗೆ ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಕಾಟಕೇರಿ ಜಂಕ್ಷನ್‌ ಬಳಿ ಹೆದ್ದಾರಿಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು ಮತ್ತೆ ಕುಸಿಯುವ ಆತಂಕ ಎದುರಾಗಿದೆ.

ಕಳೆದ ವರ್ಷ ಭೂಕುಸಿತವಾಗಿದ್ದ ಸ್ಥಳದಲ್ಲಿ ಮರಳಿನ ಚೀಲ ಇಟ್ಟು, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಈಗ ಅದೇ ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬ್ಯಾರಿಕೇಡ್‌ ಹಾಕಿ, ಆ ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಒಂದು ಬದಿಯಲ್ಲಿ ಮಾತ್ರ ಲಘು ವಾಹನಗಳು ಸಂಚರಿಸುತ್ತಿವೆ. ಸರಕು ಸಾಗಣೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ 101 ಮಿ.ಮೀ, ಮಡಿಕೇರಿಯಲ್ಲಿ 46 ಮಿ.ಮೀ, ಸಂಪಾಜೆಯಲ್ಲಿ 34 ಮಿ.ಮೀ, ಶಾಂತಳ್ಳಿಯಲ್ಲಿ 43 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.