ADVERTISEMENT

ಕೊಡಗಿನಲ್ಲಿ ವರ್ಷಧಾರೆ: ಭಾಗಮಂಡಲ ಜಲಾವೃತ

ಇಂದು ಕೊಡಗಿನ ಶಾಲಾ– ಕಾಲೇಜುಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:39 IST
Last Updated 7 ಆಗಸ್ಟ್ 2019, 5:39 IST
ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಭಾಗಮಂಡಲ– ನಾಪೋಕ್ಲು ರಸ್ತೆಯ ಮೇಲೆ ಹರಿಯುತ್ತಿರುವ ಕಾವೇರಿ ನೀರು
ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಭಾಗಮಂಡಲ– ನಾಪೋಕ್ಲು ರಸ್ತೆಯ ಮೇಲೆ ಹರಿಯುತ್ತಿರುವ ಕಾವೇರಿ ನೀರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂ‍ಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಶಾಲಾ–ಕಾಲೇಜುಗಳಿಗೆ ಬುಧವಾರವೂ (ಆ.7) ರಜೆ ಘೋಷಿಸಲಾಗಿದೆ.

ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳಲ್ಲಿ ಕ್ಷಣಕ್ಷಣಕ್ಕೂ ನೀರಿನಮಟ್ಟ ಏರಿಕೆಯಾಗುತ್ತಿದೆ. ಪಾಲೂರು, ಕೊಟ್ಟಮುಡಿ, ಹೊದ್ದೂರು, ಬಲಮುರಿ, ಕರಡಿಗೋಡು ಗ್ರಾಮಗಳಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ನೂರಾರು ಎಕರೆ ಭತ್ತದ ಗದ್ದೆ ಮುಳುಗಡೆಯಾಗಿದೆ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು ಭಾಗಮಂಡಲ ಜಲಾವೃತಗೊಂಡಿದೆ. ಭಾಗಮಂಡಲ–ತಲಕಾವೇರಿ ಹಾಗೂ ಭಾಗಮಂಡಲ–ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಸ್ಥಳೀಯರಿಗೆ, ರಸ್ತೆ ದಾಟಲು ಬೋಟ್ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಅಗ್ನಿ
ಶಾಮಕ ದಳ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ತಲಕಾವೇರಿಗೆ ತೆರಳದಂತೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.

ADVERTISEMENT

ಮಡಿಕೇರಿಯಲ್ಲಿ ಮನೆಯೊಂದರ ಮೇಲೆ ಮಣ್ಣು ಕುಸಿದಿದೆ. ರೇಸ್‌ಕೋರ್ಸ್‌ ರಸ್ತೆಯಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು. ದಕ್ಷಿಣ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಗಾಳಿ ಹಾಗೂ ಮಳೆಗೆ ಅಲ್ಲಲ್ಲಿ ವಿದ್ಯುತ್‌ ಕಂಬಗಳು ಉರುಳಿದ್ದು ಎಮ್ಮೆಮಾಡು, ನೆಲಜಿ, ಕಕ್ಕಬ್ಬೆ, ನಾಲಾಡಿ ಗ್ರಾಮಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ.

24 ಗಂಟೆಯಲ್ಲಿ ಪೊನ್ನಂಪೇಟೆಯಲ್ಲಿ 180 ಮಿ.ಮೀ, ಭಾಗಮಂಡಲದಲ್ಲಿ 170,ಶಾಂತಳ್ಳಿ 129 ಮಿ.ಮೀ ಮಳೆಯಾಗಿದೆ.

ಮಂಗಳವಾರ ಸಂಜೆಯ ವೇಳೆಗೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 85.40 ಅಡಿ ಇತ್ತು.17,775 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದರೆ, 6,321 ಕ್ಯುಸೆಕ್‌ ಹೊರಹರಿವು ಇತ್ತು.

ಕೇವಲ 12 ಗಂಟೆ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1.2 ಅಡಿ ಹೆಚ್ಚಾಗಿದೆ.

ಕರಾವಳಿಯಲ್ಲಿ ಹೆಚ್ಚು ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಮಂಗಳೂರು ಹಾಗೂ ಕಾರವಾರದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಭಾಗದಲ್ಲಿ ನೈರುತ್ಯ ದಿಕ್ಕಿನೆಡೆಗೆ ಗಂಟೆಗೆ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.1ಮೀಟರ್‌ನಿಂದ 3.7ಮೀಟರ್‌ನಷ್ಟು ಎತ್ತರದ ಅಲೆಗಳೂ ಏಳುತ್ತಿವೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ತಲಾ 28 ಸೆಂ.ಮೀ. ಮಳೆಯಾಗಿದೆ. ಕೊಲ್ಲೂರು 27, ಲಿಂಗನಮಕ್ಕಿ 21, ಭಟ್ಕಳ 20, ಕೊಪ್ಪ 15, ಕಳಸಾ, ಶೃಂಗೇರಿ 14 ಸೆಂ.ಮೀ.ಮಳೆಯಾಗಿದೆ.

ಸೂಕ್ಷ್ಮ ಪ್ರದೇಶದಲ್ಲಿ ನಿಗಾ

ಮಡಿಕೇರಿ: ಜಿಲ್ಲೆಯ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತವಾಗಿದೆ. ಕಳೆದ ವರ್ಷ ಭೂಕುಸಿತದಿಂದ ಕಂಗಾಲಾಗಿದ್ದ ಜನರು, ಸುರಕ್ಷಿತ ಸ್ಥಳಗಳಿಗೆ ಹಾಗೂ ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ.

ಜಿಲ್ಲಾಡಳಿತವು 33 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು ಅಲ್ಲಿ ತೀವ್ರ ನಿಗಾ ವಹಿಸಿದೆ. ಎನ್‌ಡಿಆರ್‌ಎಫ್‌ ತಂಡವನ್ನು ನಿಯೋಜಿಸಲಾಗಿದೆ. ಇನ್ನೂ ನಾಲ್ಕು ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ರೈಲು, ರಸ್ತೆ ಸಂಪರ್ಕ ಕಡಿತ

ಬೆಂಗಳೂರು: ಸಕಲೇಶಪುರ –ಕುಕ್ಕೆ ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದ, ಶಿರಿವಾಗಿಲು ರೈಲು ನಿಲ್ದಾಣದಿಂದ ಸುಬ್ರಹ್ಮಣ್ಯ ರೈಲು ನಿಲ್ದಾಣ ನಡುವಿನ ಕಿ.ಮೀ. 86/100 ನಲ್ಲಿ ರೈಲು ಹಳಿ ಮೇಲೆ ಕಲ್ಲುಗಳು ಬೀಳುವ ಸಾಧ್ಯತೆ ಇರುವುದರಿಂದ ಮಂಗಳವಾರ ಈ ಮಾರ್ಗದ ಪ್ರಯಾಣಿಕರ ರೈಲು ಹಾಗೂ ಗೂಡ್ಸ್‌ ರೈಲು ಸಂಚಾರ ರದ್ದುಗೊಳಿಸಲಾಗಿತ್ತು.

ಬೆಳಗಾವಿ– ಖಾನಾಪುರ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ, ರೈಲು ಮಾರ್ಗ ಹಾನಿಗೊಳಗಾಗಿದೆ. ಪಟ್ನಾ– ವಾಸ್ಕೊ, ಹುಬ್ಬಳ್ಳಿ– ವಾಸ್ಕೊ, ಹಜರತ್‌ ನಿಜಾಮುದ್ದೀನ್‌– ವಾಸ್ಕೊ ರೈಲುಗಳು ಬೆಳಗಾವಿ ನಿಲ್ದಾಣದಲ್ಲಿಯೇ ನಿಂತಿದ್ದು, ಅವುಗಳ ಮುಂದಿನ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ಶಾಲಾ ಕಾಲೇಜುಗಳಿಗೆರಜೆ

ಹಾಸನ: ಜಿಲ್ಲೆಯಾದ್ಯಂತ ಮಂಗಳವಾರ ಮಳೆಯ ಅಬ್ಬರ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಸಕಲೇಶಪುರ ತಾಲ್ಲೂಕಿನಾದ್ಯಂತ ಹಾಗೂ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ, ಆಲೂರು ತಾಲ್ಲೂಕಿನ ಹೊಸಕೋಟೆ ಕುಂದೂರು, ಪಾಳ್ಯ ಹೋಬಳಿಯ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಿಸಿತ್ತು.

24 ಗಂಟೆಗಳ ಅವಧಿಯಲ್ಲಿ, ಸಕಲೇಶಪುರ ತಾಲ್ಲೂಕಿನಲ್ಲಿ ಸರಾಸರಿ 120 ಮಿ.ಮೀ., ಹೆತ್ತೂರಿನಲ್ಲಿ 140 ಮಿ.ಮೀ ಮಳೆಯಾಗಿದೆ. ಹೇಮಾವತಿ ನದಿ ನೀರಿನ ಪ್ರಮಾಣ ಏರುತ್ತಿರುವುದರಿಂದ, ಯಾವುದೇ ಕ್ಷಣದಲ್ಲಾದರೂ ಸ್ಥಳಾಂತರಕ್ಕೆ ಸಿದ್ಧರಾಗಿರುವಂತೆ ಸಕಲೇಶಪುರದ ಆಜಾದ್ ರಸ್ತೆಯ ನಿವಾಸಿಗಳಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.