ಹುಬ್ಬಳ್ಳಿ ದಾಜಿಬಾನ್‌ಪೇಟೆಯ ರಸ್ತೆ ಮಳೆಯಿಂದಾಗಿ ಜಲಾವೃತವಾಗಿತ್ತು
ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಜ್ಯದ ಕೊಡಗು, ಧಾರವಾಡ, ಉತ್ತರ ಕನ್ನಡ, ಬೀದರ್ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.
ಆದರೆ, ಕರಾವಳಿಯಲ್ಲಿ ಶುಕ್ರವಾರದಂದು ಮಳೆ ಪ್ರಮಾಣ ತುಸು ತಗ್ಗಿದೆ. ಮಳೆ ಸಂಬಂಧಿತ ಅವಘಡ
ಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ವರದಿ:
ಧಾರವಾಡ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಯ ಬಹುತೇಕ ಕಡೆ ಶುಕ್ರವಾರ ಮಳೆಯಾಯಿತು.
ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ಆಗಾಗ ಬಿರುಸಿನ ಮಳೆ ಸುರಿಯಿತು. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ಹಳ್ಳಗಳು ಭರ್ತಿಯಾಗಿವೆ. ಜಿಲ್ಲೆಯ ಸೂಪಾ, ಕದ್ರಾ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ 20 ಸಾವಿರ ಕ್ಯೂಸೆಕ್ ಮೀರಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಸುತ್ತಮುತ್ತಲೂ ಮಳೆಯಾಯಿತು. ಹುಬ್ಬಳ್ಳಿಯಲ್ಲಿ ಕೆಲ ಕಡೆ ರಸ್ತೆಗಳು ಜಲಾವೃತವಾಗಿದ್ದವು. ಗದಗ ಜಿಲ್ಲೆಯ ಗಜೇಂದ್ರಗಡ, ನರಗುಂದ ಭಾಗದಲ್ಲಿ ಮಳೆಯಾಯಿತು.
ಕೊಪ್ಪಳ, ಬೀದರ್‌ನಲ್ಲಿ ಉತ್ತಮ:
ಕೊಪ್ಪಳ ಜಿಲ್ಲೆಯಾದ್ಯಂತ ಶುಕ್ರವಾರ ಉತ್ತಮ ಮಳೆಯಾಗಿದ್ದು, ಮಳೆ ಕೊರತೆಯಿಂದ ಆತಂಕದಲ್ಲಿದ್ದ ರೈತರಿಗೆ ಇದರಿಂದ ಖುಷಿಯಾಗಿದೆ.
ಕೊಪ್ಪಳ, ಮುನಿರಾಬಾದ್, ಗಂಗಾವತಿ ಭಾಗದಲ್ಲಿ ಜೋರು ಮಳೆ ಬಂದಿದೆ. ಹಲವು ದಿನಗಳ ಬಿಡುವಿನ ನಂತರ ಬೀದರ್ ಜಿಲ್ಲೆಯ ಹಲವೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಬೀದರ್ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆ ಜೋರಾಗಿ ಮಳೆ ಸುರಿದಿದೆ.
ಮಡಿಕೇರಿ ವರದಿ:
ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಯಿತು. ಭಾರಿ ಮಳೆ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ಶನಿವಾರ (ಜುಲೈ 19) ರೆಡ್ ಅಲರ್ಟ್ ಘೋಷಿಸಿದೆ. ಭಾಗಮಂಡಲದಲ್ಲಿ 4 ಸೆಂ.ಮೀ ಮಳೆಯಾಗಿದೆ.
ಕೊಡಗು ಜಿಲ್ಲೆಯ ಗಡಿ ಭಾಗಕರಿಕೆ–ಕೇರಳದ ಕಾಸರಗೋಡಿನ ಪಾಣತ್ತೂರು ಮಧ್ಯೆ ಹರಿಯುವ ಮಂಞಡ್ಕ ನದಿಯಲ್ಲಿ ಬೆಳಗಾವಿಯ ಯುವಕ ದುರುಗಪ್ಪ ಮಾದಾರ (19) ಎಂಬುವವರು ಬೈಕ್ ಸಮೇತ ಕೊಚ್ಚಿ ಹೋಗಿರುವ ಶಂಕೆ ಇದ್ದು, ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ: ದಂಪತಿ, ಕಾರ್ಮಿಕನ ಶವ ಪತ್ತೆ
ಮಂಗಳೂರು: ನಗರದಲ್ಲಿ ಮಧ್ಯಾಹ್ನದ ನಂತರ ಮಳೆಯ ತೀವ್ರತೆ ಹೆಚ್ಚಾಯಿತು. ಉಳ್ಳಾಲ ಬಳಿಯ ಪಿಲಾರು ರಾಜಕಾಲುವೆ ಕಾಲುಸಂಕ ದಾಟುವಾಗ ಬುಧವಾರ ನೀರು ಪಾಲಾಗಿದ್ದ ಕೂಲಿಕಾರ್ಮಿಕ, ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲೊನಿಯ ಕೇಶವ ಶೆಟ್ಟಿ (64) ಅವರ ಮೃತದೇಹ ಶುಕ್ರವಾರ ರಾಜಕಾಲುವೆಯಲ್ಲಿ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಹೊಡೆಯಾಲದಲ್ಲಿ ಹಳ್ಳ ಉಕ್ಕಿ ಹರಿದು ಗುರುವಾರ ನೀರಿನಲ್ಲಿ ಕೊಚ್ಚಿಹೋಗಿದ್ದ ಈಶ್ವರ (65), ಲತಾ (55) ದಂಪತಿಯ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.