ADVERTISEMENT

ಮಳೆ ಹಾನಿ: ರಸ್ತೆ ದುರಸ್ತಿಗೆ ಸಿ.ಎಂ ಸೂಚನೆ

ಮಳೆ ಹಾನಿ: ರಸ್ತೆ ದುರಸ್ತಿಗೆ ಸಿ.ಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 20:03 IST
Last Updated 21 ನವೆಂಬರ್ 2021, 20:03 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಉಂಟಾಗಿರುವ ಹಾನಿ ಮತ್ತು ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಅವಲೋಕಿಸಲು ಭಾನುವಾರ ರಾತ್ರಿ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ತಕ್ಷಣ ₹ 500 ಕೋಟಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಆದೇಶಿಸಿದರು.

ಕೃಷಿ ಇಲಾಖೆಯ ಸಿಬ್ಬಂದಿ ಕಂದಾಯ ಮತ್ತು ತೋಟಗಾರಿಕೆ ಅಧಿಕಾರಿಗಳ ಜೊತೆ ಜಂಟಿ ಸಮೀಕ್ಷೆ ತಕ್ಷಣ ಆರಂಭಿಸಿ, ನಷ್ಟದ ವಿವರವನ್ನು ಪರಿಹಾರ ಆ್ಯಪ್‌ನಲ್ಲಿ ದಾಖಲಿಸಬೇಕು. ಬೆಳೆ ನಷ್ಟ ಪರಿಹಾರ ವಿತರಣೆ ತ್ವರಿತವಾಗಿ ಆಗಬೇಕು. ಕೃಷಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಮುಂದಿನ 15-20 ದಿನಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ವರದಿಯಾಗಿದೆ.

ADVERTISEMENT

ನವೆಂಬರ್ ತಿಂಗಳಿನ ನಷ್ಟದ ವಿವರ(ವಿಷಯ; ಹಾನಿ)

ಜೀವ ಹಾನಿ; 24

ಸಂಪೂರ್ಣ ಮನೆ ಹಾನಿ; 658

ಭಾಗಶಃ ಮನೆ ಹಾನಿ; 8,495

ಜಾನುವಾರು ಸಾವು; 191

ಕೃಷಿ ಬೆಳೆ ಹಾನಿ; 5 ಲಕ್ಷ ಹೆಕ್ಟೇರ್

‌‌ತೋಟಗಾರಿಕೆ ಬೆಳೆ; 30,114 ಹೆಕ್ಟೇರ್

ರಸ್ತೆ ಹಾನಿ; 2,203 ಕಿ.ಮೀ.

ಸೇತುವೆಗಳು; 165

ಶಾಲೆಗಳು; 1,225

ಪ್ರಾಥಮಿಕ ಆರೋಗ್ಯ ಕೇಂದ್ರ; 39

ವಿದ್ಯುತ್ ಕಂಬ; 1,674

ವಿದ್ಯುತ್ ಟ್ರಾನ್ಸ್ ಫಾರ್ಮರ್; 278

ವಾರ್ಡ್‌ವಾರು ವರದಿಗೆ ಸೂಚನೆ

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಪ್ರತಿವಲಯಕ್ಕೆ ₹25 ಲಕ್ಷ ಬಿಡುಗಡೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ವಸ್ತುಸ್ಥಿತಿ ಆಧಾರಿತ ವರದಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು.
ಮಾರಣಾಂತಿಕ ರಸ್ತೆ ಗುಂಡಿಗಳ ಬಳಿ ಬ್ಯಾರಿಕೇಡ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಿ, ದುರಸ್ತಿಗೆ ಕ್ರಮ ವಹಿಸಬೇಕು. ಮಳೆ ಹಾನಿ ಸಂಭವಿಸಿದ ಕುರಿತು ವಾರ್ಡ್‌ವಾರು ವರದಿ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.