ADVERTISEMENT

ಕುಂಭದ್ರೋಣ ಮಳೆಗೆ ನಲುಗಿದ ಕಲ್ಯಾಣ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 2:45 IST
Last Updated 15 ಅಕ್ಟೋಬರ್ 2020, 2:45 IST
ಕಲಬುರ್ಗಿಯಲ್ಲಿ ಮಂಗಳವಾರ ರಾತ್ರಿಯಿಡಿ ಸುರಿದ ಮಳೆಯಿಂದ ಪೂಜಾ ಕಾಲೊನಿ ರಾಜಾಜಿ ನಗರ ಜಲಾವೃತಗೊಂಡಿರುವ ನೋಟ
ಕಲಬುರ್ಗಿಯಲ್ಲಿ ಮಂಗಳವಾರ ರಾತ್ರಿಯಿಡಿ ಸುರಿದ ಮಳೆಯಿಂದ ಪೂಜಾ ಕಾಲೊನಿ ರಾಜಾಜಿ ನಗರ ಜಲಾವೃತಗೊಂಡಿರುವ ನೋಟ   

ಕಲಬುರ್ಗಿ: ಕಲಬುರ್ಗಿ, ಬೀದರ್‌ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆಯವರೆಗೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿಯೂ ಜೋರು ಮಳೆಯಾಗಿದೆ. ಕೊಪ್ಪಳದಲ್ಲಿ ಇಡೀ ದಿನ ಜಿಟಿಜಿಟಿ ಮಳೆ ಆಯಿತು.

ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನರಿಬೋಳದಲ್ಲಿ ಭೀಮಾ ನದಿ ಪ್ರವಾಹದಲ್ಲಿ ಭಗವಾನ ತಿಪ್ಪಣ್ಣ ಹಡಪದ (21) ಕೊಚ್ಚಿಹೋಗಿದ್ದಾರೆ.ಕಲಬುರ್ಗಿಯ ಸುಂದರನಗರದಲ್ಲಿ ಭೀಮಬಾಯಿ (96) ಮಲಗಿದ್ದಾಗ ಮನೆಗೆ ನುಗ್ಗಿದ ಮಳೆ ನೀರಿನಲ್ಲಿವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ.

ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳ ನದಿ, ಹಳ್ಳ–ಕೊಳ್ಳ,ಕೆರೆ,ಕಟ್ಟೆ, ನಾಲೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿಯ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡಿದರು.

ADVERTISEMENT

ಚಿಂಚೋಳಿ ತಾಲ್ಲೂಕಿನ ಹೂಡದಳ್ಳಿ,ನಾಗಾಈದಲಾಯಿ ಹಾಗೂ ದೋಟಿಕೊಳ ಗ್ರಾಮದ ಕೆರೆಗಳು ಒಡೆದು ನೀರು ಹೊಲಗಳಿಗೆ ನುಗ್ಗಿದೆ. ಚಂದ್ರಂಪಳ್ಳಿ ಮತ್ತು ನಾಗರಾಳ ಜಲಾಶಯದಿಂದ ನೀರು ನದಿಗೆ ಬಿಟ್ಟಿದ್ದರಿಂದ ಮುಲ್ಲಾ
ಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೊಟಗಾ, ಕನಕಪುರ, ಗೌಡನಹಳ್ಳಿ, ನೀಲಾಹೊಸಳ್ಳಿ, ಚಂದಾಪುರ ಬಾಂದಾರ ಸೇತುವೆ ಮುಳುಗಿವೆ.

ಕಲಬುರ್ಗಿ–ಸೇಡಂ ಮಧ್ಯದ ಮಳಖೇಡ ಬಳಿಯ ಸೇತುವೆ ಕಾಗಿಣಾ ನದಿಯ ಪ್ರವಾಹದಿಂದ ಮುಳುಗಡೆಯಾಗಿದೆ.

ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿ, ಐನೋಳ್ಳಿ ಸೇರಿದಂತೆ ವಿವಿಧ ತೋಟದ ಮನೆಗಳಲ್ಲಿ ಸಿಲುಕಿದ್ದ 43 ಜನರನ್ನು ತಾಲ್ಲೂಕು ಆಡಳಿತ ರಕ್ಷಣೆ ಮಾಡಿದೆ. ಚಿಂಚೋಳಿ–ಬೀದರ್‌ ಮಧ್ಯೆ ಸಂಪರ್ಕ ಕಡಿತಗೊಂಡಿದೆ. ಕಮಲಾಪುರ ತಾಲ್ಲೂಕಿನ ಕುರಿಕೋಟಾ ಸೇರಿದಂತೆ ಕೆಲವೆಡೆ ಜಿಲ್ಲಾ ಆಡಳಿತ ಕಾಳಜಿ ಕೇಂದ್ರಗಳನ್ನು ತೆರೆದಿದೆ.

ಬೀದರ್‌ ಜಿಲ್ಲೆಯ ಮಾಂಜ್ರಾ ಮತ್ತು ದೇವಣಿ ನದಿಗಳು ತುಂಬಿ ಹರಿಯುತ್ತಿದ್ದು, 12 ಕಿರು ಸೇತುವೆಗಳು ಮುಳುಗಡೆಯಾಗಿವೆ. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮನೆ ಕುಸಿದಿವೆ.

ಕಮಲನಗರ ತಾಲ್ಲೂಕಿನಲ್ಲಿ ಬಾಳೂರ (ಕೆ), ಸೋನಾಳ್, ಹೊಳಸಮುದ್ರ–ಹುಲಸೂರ, ಸಂಗಮ–ಖೇಡ, ಕಮಲನಗರ–ಔರಾದ್, ತೋರಣಾ–ಮುಧೋಳ, ಬಳತ (ಕೆ )–ಬೇಡಕುಂದ ಸೇತುವೆಗಳು ಮುಳುಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.