ADVERTISEMENT

ಮಳೆ: ಕೊಡಗಿನಲ್ಲಿ ಮಣ್ಣು ಕುಸಿತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 20:45 IST
Last Updated 1 ಆಗಸ್ಟ್ 2022, 20:45 IST
ಕೊಡಗು ಜಿಲ್ಲೆಯ ಭಾಗಮಂಡಲ – ಕರಿಕೆ ರಸ್ತೆಯಲ್ಲಿ ಸೋಮವಾರ ಮಣ್ಣು ಕುಸಿದು ಸಂಚಾರ ಸ್ಥಗಿತಗೊಂಡಿತ್ತು
ಕೊಡಗು ಜಿಲ್ಲೆಯ ಭಾಗಮಂಡಲ – ಕರಿಕೆ ರಸ್ತೆಯಲ್ಲಿ ಸೋಮವಾರ ಮಣ್ಣು ಕುಸಿದು ಸಂಚಾರ ಸ್ಥಗಿತಗೊಂಡಿತ್ತು   

ಮೈಸೂರು/ಹುಬ್ಬಳ್ಳಿ/ಚಿತ್ರದುರ್ಗ: ರಾಜ್ಯದ ಮೈಸೂರು ಭಾಗದ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಕೊಡಗಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ಮಣ್ಣು ಕುಸಿದಿದ್ದು, ಮರಗಳು ಉರುಳಿವೆ. ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಸುರಿದ ಮಳೆಗೆರೆ, ಕಟ್ಟೆ, ಚೆಕ್‌ಡ್ಯಾಂ ಸೇರಿ ಇತರ ಜಲಮೂಲಗಳು ಭರ್ತಿಯಾಗಿವೆ.

ಕೊಡಗು ಜಿಲ್ಲೆಯ ಭಾಗಮಂಡಲ ಮತ್ತು ಕರಿಕೆ ಭಾಗದ 11 ಕಡೆ ಮಣ್ಣು ರಸ್ತೆಗೆ ಕುಸಿದಿದೆ. ಭಾಗಮಂಡಲ– ಕರಿಕೆ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲಾಗದೆ ಪರದಾಡಿದರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಪಿ.ನೇರಲೆಕೆರೆ, ಲಾಯದ ಕೊಪ್ಪಲು, ಪಿ.ಚಿಟ್ಡನಹಳ್ಳಿಯಲ್ಲಿ ಸುಮಾರು 250 ತೆಂಗಿನ ಮರಗಳು ನೆಲಕ್ಕುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.

ADVERTISEMENT

ಪಿ.ನೇರಲೆಕೆರೆ ಮತ್ತು ಪಿ.ಚಿಟ್ಟನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 30 ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ ಸೇರಿದಂತೆ ಹಲವು ತರಕಾರಿ ಬೆಳೆಗಳು ಜಲಾವೃತಗೊಂಡಿವೆ. ಬಿಂಡಿಗನವಿಲೆ ಹೋಬಳಿಯ ಹೊನ್ನಾವರ ಕೆರೆ, ಕಲ್ಕೆರೆ, ಬಿಂಡಿಗನವಿಲೆ ಕೆರೆ ತುಂಬಿ ಹರಿಯುತ್ತಿವೆ

ಹುಬ್ಬಳ್ಳಿ ವರದಿ: ಉತ್ತರ ಕನ್ನಡದ ಹಳಿಯಾಳ, ಉಳಿದಂತೆ, ಯಲ್ಲಾಪುರ, ದಾಂಡೇಲಿ, ಮುಂಡಗೋಡ, ಶಿರಸಿ, ಸಿದ್ದಾಪುರ, ಭಟ್ಕಳ, ಹೊನ್ನಾವರ ಹಾಗೂ ಕುಮಟಾದಲ್ಲಿ ಮಳೆಯಾಗಿದೆ.

ಹೊಸಪೇಟೆ, ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಜಿಟಿಜಿಟಿ ಮಳೆಯಾಗಿದೆ. ಬೆಳಗಾವಿ ನಗರ, ತಾಲ್ಲೂಕು, ಖಾನಾಪುರ, ಚಿಕ್ಕೋಡಿ ಹಾಗೂ ಸವದತ್ತಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಸಾಧಾರಣಮಳೆಸುರಿಯಿತು.

ಚಿತ್ರದುರ್ಗ ವರದಿ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ.ಹಿರಿಯೂರು ತಾಲ್ಲೂಕಿನ ಧರ್ಮಪುರ, ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಹಾಗೂ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಭಾಗದಲ್ಲಿ ಸುರಿದ ಮಳೆಗೆ ಕೆರೆ, ಕಟ್ಟೆ, ಚೆಕ್‌ಡ್ಯಾಂ ತುಂಬಿವೆ.

ಕೇರಳದಲ್ಲಿ ಆರು ಮಂದಿ ಸಾವು: ಕೇರಳದಲ್ಲಿ ವರ್ಷಧಾರೆ ಮುಂದುವರಿದಿದ್ದು, ಕಾರೊಂದು ನಿಯಂತ್ರಣ ತಪ್ಪಿ ಹೊಳೆಯಲ್ಲಿ ಬಿದ್ದಿದ್ದರಿಂದ ಸೋಮವಾರ ಒಂದೇ ಕುಟುಂಬದ ಮೂವರು ಮೃತ
ಪಟ್ಟಿದ್ದಾರೆ. ಈವರೆಗೂ ಆರು ಜನ ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.