ADVERTISEMENT

ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ಕರ್ನಾಟಕ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 14:14 IST
Last Updated 20 ನವೆಂಬರ್ 2025, 14:14 IST
<div class="paragraphs"><p>ಮಕ್ಕಳಿಗೂ ಹೆಲ್ಮೆಟ್</p></div>

ಮಕ್ಕಳಿಗೂ ಹೆಲ್ಮೆಟ್

   

–ಐಸ್ಟಾಕ್ ಚಿತ್ರ

ಬೆಂಗಳೂರು: ‘ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಮಕ್ಕಳಿಗೆ ಹೆಲ್ಮೆಟ್ ಮತ್ತು ಸುರಕ್ಷತಾ ಕ್ರಮಗಳನ್ನು ಅನ್ವಯಿಸುವ ಕೇಂದ್ರ ಮೋಟಾರು ವಾಹನ ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ADVERTISEMENT

‘ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷದೊಳಗಿನ ಮಕ್ಕಳನ್ನು ಹಿಂಬದಿ ಸವಾರರನ್ನಾಗಿ ಕರೆದುಕೊಂಡು ಹೋಗುವಾಗ ಮಕ್ಕಳೂ ಹೆಲ್ಮೆಟ್ ಧರಿಸಿರಬೇಕು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಸಂಬಂಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮುಂದುವರೆಸಬೇಕು’ ಎಂದು ನ್ಯಾಯಪೀಠವು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಈ ಸಂಬಂಧ ಶಿವಮೊಗ್ಗದ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಕೆ.ಅರ್ಚನಾ ಭಟ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಮಾರುಕಟ್ಟೆಯಲ್ಲಿ ಸುರಕ್ಷತಾ ಪರಿಕರಗಳ ಲಭ್ಯತೆಯನ್ನು ಖಚಿತಪಡಿಸಿಕೊಂಡ ಬಳಿಕ ನಿಯಮವನ್ನು ಜಾರಿಗೊಳಿಸಲು ನ್ಯಾಯಪೀಠ ಆರು ತಿಂಗಳ ಕಾಲಾವಕಾಶ ನೀಡಿದೆ.

‘ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ವಾಸ್ತವವಾಗಿ ಅವುಗಳಾವುವೂ ಕಠಿಣ ರೀತಿಯಲ್ಲಿ ಜಾರಿಗೆ ಬಂದಿಲ್ಲ. ಹೀಗಾಗಿ, ನಿಯಮಗಳನ್ನು ಜಾರಿಗೆ ತರಲು ಸರ್ಕಾರ ತಕ್ಷಣವೇ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿರುವ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

‘ಸುರಕ್ಷತಾ ಸಲಕರಣೆಗಳ ಜೊತೆಗೆ, ನಾಲ್ಕು ವರ್ಷದ ಮಕ್ಕಳನ್ನು ಹಿಂಬದಿ ಸವಾರರನ್ನಾಗಿ ಕರೆದೊಯ್ಯುವಾಗ ಮೋಟಾರ್‌ ಸೈಕಲ್‌ ವೇಗವು ಗಂಟೆಗೆ 40 ಕಿ.ಮೀ ಗಿಂತ ಹೆಚ್ಚಿರಬಾರದು’ ಎಂದು ಕೇಂದ್ರದ ಮೋಟಾರು ಸಾರಿಗೆಯ ಹೊಸ ನಿಯಮದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.