ADVERTISEMENT

ಸ್ಪಂದನೆಯೇ ಇಲ್ಲದ ಸಹಾಯವಾಣಿಗಳು 

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 11:25 IST
Last Updated 3 ಅಕ್ಟೋಬರ್ 2019, 11:25 IST
   

ಬೆಂಗಳೂರು: ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಅಗ್ರ ಪಟ್ಟಿಯಲ್ಲಿದೆ. ಆತ್ಮಹತ್ಯೆ ತಡೆಗೆ ರಾಜ್ಯ ಸರ್ಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆಪ್ತ ಸಮಾಲೋಚನಾ ಸಹಾಯವಾಣಿಯನ್ನು ನೀಡಿದೆಯಾದರೂ ಅವುಗಳಿಗೆ ಕರೆ ಮಾಡಿದರೆ ಸ್ಪಂದನೆಯೇ ಇಲ್ಲ.

ದೇಶದಲ್ಲಿ ವಾರ್ಷಿಕ 1 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ‘ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‍ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ದೇಶದಲ್ಲಿ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆತ್ಮಹತ್ಯೆ ಏರಿಕೆ ಪ್ರಮಾಣದಲ್ಲೂ ಕರ್ನಾಟಕವೇ ಮುಂದಿದೆ. ಈ ಪ್ರವೃತ್ತಿ ತಡೆಯಲು ಆಪ್ತ ಸಮಾಲೋಚನೆಯೇ ಚಿಕಿತ್ಸಕ ಮಾರ್ಗ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿಯೇ ಉಚಿತ ಹಾಗೂ ಮುಕ್ತವಾಗಿ ಆಪ್ತ ಸಮಾಲೋಚನೆಗಾಗಿ ಕರ್ನಾಟಕ ಸರ್ಕಾರವೇನೋ ಸಮಾಲೋಚನೆಯ ಸಹಾಯವಾಣಿಗಳ ಸಂಖ್ಯೆಗಳನ್ನು ನೀಡಿದೆಯಾದರೂ, ಅದು ಹೆಸರಿಗಷ್ಟೇ ಎಂಬಂತಾಗಿವೆ.

ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್‌ಹೆಲ್ಪ್‌ಲೈನ್‌ ವಿಭಾಗದಲ್ಲಿ ಆತ್ಮಹತ್ಯೆ ತಡೆ ಸಹಾಯವಾಣಿ–ಸಹಾಯ್‌ ‌8025497777 ಅನ್ನು ಉಲ್ಲೇಖಿಸಲಾಗಿದೆ. ಈ ಸಂಖ್ಯೆಗೆ ಈಗಾಗಲೇ ಸಾಕಷ್ಟು ಪ್ರಚಾರವೂ ಸಿಕ್ಕಿದೆ. ಮಾಧ್ಯಮಗಳ ಹಲವು ವರದಿಗಳಲ್ಲೂ ಈ ನಂಬರ್‌ ಅನ್ನು ಉಲ್ಲೇಖಿಸಲಾಗುತ್ತದೆ. ಆದರೆ, ಈ ಸಂಖ್ಯೆಗೆ ಕರೆ ಮಾಡಿದರೆ ಫೋನ್‌ ರಿಸೀವ್‌ ಮಾಡುವವರೇ ಇಲ್ಲ. ಪರೀಕ್ಷೆ ಮಾಡಲೆಂದೇ ಸತತ ಮೂರು ದಿನ ಪ್ರಯತ್ನ ಮಾಡಿದರೂ ಇಲ್ಲಿ ಯಾರೂ ಸ್ಪಂದಿಸಲಿಲ್ಲ.

ADVERTISEMENT

ಇನ್ನು ಆರೋಗ್ಯ ಸಮಸ್ಯೆ ಮತ್ತು ಆತ್ಮಹತ್ಯೆ ತಡೆಗೆ ಸಮಾಲೋಚನೆ ಬಯಸುವವರಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 104 ತುರ್ತು ಸಹಾಯವಾಣಿಯನ್ನು ನಿರ್ವಹಿಸುತ್ತಿದೆ. ಆದರೆ, ಇದಕ್ಕೆ ಕರೆ ಮಾಡಿದರೆ ‘ನೇತ್ರದಾನ ಮಹಾದಾನ...,’ ಎಂಬ ಘೋಷ ವಾಕ್ಯವೊಂದು ಕೇಳುತ್ತದೆ. 15 ಸೆಕೆಂಡ್‌ಗಳ ನಂತರ ಕರೆ ತಾನಾಗಿಯೇ ಕಡಿತಗೊಳ್ಳುತ್ತದೆ.

ಈ ಕುರಿತು ಮಾತನಾಡಲು ಆರೋಗ್ಯ ಸಚಿವ ಬಿ. ಶ್ರೀರಾಮುಲು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಮತ್ತು ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಮತ್ತು ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಯಾರ ಸಂಪರ್ಕವೂ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.