
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಾ. ಸುರೇಶ್ ಹನಗವಾಡಿ, ಪ್ರೇಮರೂಪ ಆಳ್ವ ಇದ್ದರು
ಬೆಂಗಳೂರು: ‘ಹಿಮೋಫಿಲಿಯಾ ರೋಗಿಗಳ ಚಿಕಿತ್ಸೆ ಹಾಗೂ ಔಷಧಕ್ಕಾಗಿ ಸರ್ಕಾರದಲ್ಲಿ ಹಣಕಾಸು ಕೊರತೆ
ಯಿಲ್ಲ. ಇದಕ್ಕಾಗಿ ₹50 ಕೋಟಿ ಮೀಸಲಿಡಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದ ನೆಹರು ತಾರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕುಸುಮ ಸಂಜೀವಿನಿ’ ಯೋಜನೆಯಡಿ ಹಿಮೋಫಿಲಿಯಾ ರೋಗಿಗಳಿಗೆ ರೋಗ
ನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಈ ಯೋಜನೆಯಡಿ ಹಿಮೋಫಿಲಿಯಾ ರೋಗಿಗಳ ಚಿಕಿತ್ಸೆಗೆ 2017ರಲ್ಲಿ ನಮ್ಮದೇ ಸರ್ಕಾರ ಒತ್ತು ನೀಡಿತ್ತು. ಈ ಯೋಜನೆಗೆ ಸರ್ಕಾರದಿಂದ ₹42.55 ಕೋಟಿ ಮೀಸಲಿಡಲಾಗಿದ್ದು, ಔಷಧಕ್ಕಾಗಿಯೇ ₹17 ಕೋಟಿ ಇರಿಸಲಾಗಿದೆ. ಇದನ್ನು ಹೆಚ್ಚಿಸುವುದಕ್ಕೆ ಸಿದ್ಧರಿದ್ದೇವೆ’ ಎಂದು ಹೇಳಿದರು.
‘ಕರ್ನಾಟಕದಲ್ಲಿ 2,621 ಮಂದಿ ಹಿಮೋಫಿಲಿಯಾ ರೋಗಿಗಳಿದ್ದು, ಪ್ರತಿವರ್ಷ ಒಬ್ಬರಿಗೆ ₹5 ಲಕ್ಷ ವೆಚ್ಚ ಮಾಡಬೇಕಾಗುತ್ತದೆ. ಇದರಿಂದ ರೋಗಿಗಳಿಗೆ ಅಗತ್ಯ ಚಿಕಿತ್ಸೆ, ಔಷಧ ಕೊಡಿಸಲು ಆರೋಗ್ಯ ಇಲಾಖೆ ಸೇವೆಗಳನ್ನು ವಿಸ್ತರಿಸುತ್ತಿದೆ. 36 ಕೇಂದ್ರಗಳಿಗೆ ಹೋಗಿ ಬರಲು ಉಚಿತ ಆಂಬುಲೆನ್ಸ್ ಸೇವೆಯನ್ನೂ ಆರಂಭಿಸಿದ್ದೇವೆ. ರೋಗ ನಿರೋಧಕ ಚುಚ್ಚುಮದ್ದು ಕೂಡ ಬಂದಿರುವುದು ಪರಿಸ್ಥಿತಿ ಸುಧಾರಿಸಲಿದೆ’ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಹಿಮೋಫಿಲಿಯಾ ಹಾಗೂ ಇತರೇ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆ ಕಾಂಗ್ರೆಸ್ ಸರ್ಕಾರ ನಿಲ್ಲುತ್ತದೆ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಆದರೆ ಯಾರೂ ಸಹ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇಡೀ ದೇಶದಲ್ಲಿ ನಾವು ಮೊದಲ ಬಾರಿಗೆ ಸಹಾಯಹಸ್ತ ಚಾಚಿದ್ದೇವೆ’ ಎಂದು ಹೇಳಿದರು.
‘ಪ್ರಪಂಚದ ಯಾವುದೇ ದೇಶಕ್ಕೆ ಹೋದರು ನಮ್ಮ ಕರ್ನಾಟಕದ ವೈದ್ಯರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇಡೀ ದೇಶದಲ್ಲಿಯೇ ಕರ್ನಾಟಕ ಅನೇಕ ಕ್ಷೇತ್ರಗಳಲ್ಲಿ ಮುಂದಿದೆ. ಐದು ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ₹5 ಸಾವಿರ ಉಳಿತಾಯ ಮಾಡುತ್ತಿದೆ. ಸರ್ಕಾರಕ್ಕೆ ಹೊರೆ ಆಗುತ್ತಿದ್ದರೂ ಜನರ ಮೇಲಿರುವ ಆರ್ಥಿಕ, ಮಾನಸಿಕ ಒತ್ತಡ ಕಡಿಮೆ ಮಾಡಲು ಬೆಂಬಲ ನೀಡುತ್ತೇವೆ’ ಎಂದರು.
ಎನ್‌ಎಚ್‌ಎಂ ನಿರ್ದೇಶಕ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ನಿರ್ದೇಶಕ ಡಾ.ವಸಂತಕುಮಾರ್, ಉಪನಿರ್ದೇಶಕರಾದ ಡಾ.ಶಕೀಲ, ಡಾ.ರಾಧಾಕೃಷ್ಣ, ಬೆಂಗಳೂರು ಹಿಮೋಫಿಲಿಯಾ ಸೊಸೈಟಿ ಕಾರ್ಯದರ್ಶಿ ಪ್ರೇಮರೂಪ ಆಳ್ವ ಉಪಸ್ಥಿತರಿದ್ದರು.
ಹಿಮೋಫಿಲಿಯಾ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವ ಪ್ರೊಟೀನ್ ಕೊರತೆ ಇರುತ್ತದೆ. ಸರ್ಕಾರ ಇವರಿಗೆ ಆರೋಗ್ಯ ಸೇವೆ ಜತೆಗೆ ಆರ್ಥಿಕ ಬೆಂಬಲವನ್ನೂ ನೀಡಬೇಕುಡಾ.ಸುರೇಶ್ ಹನಗವಾಡಿ, ಅಧ್ಯಕ್ಷ, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ
ಆರೋಗ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ‘ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ’ ಎಂದು ಘೋಷಣೆ ಹಾಕಿದ ಘಟನೆ ನಡೆಯಿತು.
ಶಿವಕುಮಾರ್ ಅವರು ಮಾತನಾಡುವಾಗ, ‘ಕಾರ್ಯಕ್ರಮದಲ್ಲಿ ಕೊಂಚ ನಿದ್ದೆ ಬಂದಿತ್ತು’ ಎಂದು ಪ್ರಸ್ತಾಪಿಸಿದರು. ‘ನೀವು ಮುಖ್ಯಮಂತ್ರಿಯಾಗುವವರೆಗೂ ನಿದ್ರೆ ಮಾಡಲು ಬಿಡುವುದಿಲ್ಲ’ ಎಂದು ಕೆಲವರು ಹೇಳಿದರು.
‘ಆಯ್ತು ಸುಮ್ಮನೇ ಕುಳಿತುಕೊಳ್ಳಿ’ ಎಂದು ಗದರಿಸಿದ ಡಿಕೆಶಿ, ‘ಜನರು ಎದ್ದುನಿಂತು ಚಪ್ಪಾಳೆ ಹೊಡೆಯಬೇಡಿ. ಬದಲಾಗಿ ಮತ್ತೆ ಇದೇ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶೀರ್ವದಿಸಿ. ಆಗ ಇನ್ನೂ ಹೆಚ್ಚಿನ ಸೇವೆ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.