ADVERTISEMENT

30 ಮಂದಿಗೆ ‘ಹೆಪಟೈಟಿಸ್ ಸಿ’ ವೈರಸ್‌: ವ್ಯಕ್ತಿ ಸಾವು

ರೋಗಿಗಳ ಸಂಬಂಧಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 19:12 IST
Last Updated 26 ಜೂನ್ 2019, 19:12 IST

ಕೆ.ಆರ್.ನಗರ (ಮೈಸೂರು ಜಿಲ್ಲೆ): ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಪಡೆಯುತ್ತಿದ್ದ 36 ಮಂದಿಯ ಪೈಕಿ, 30 ಜನರಲ್ಲಿ ‘ಹೆಪಟೈಟಿಸ್ ಸಿ’ ವೈರಸ್‌ ಕಾಣಿಸಿಕೊಂಡಿದ್ದು, ಅವರ ಪೈಕಿ ಕೆ.ಎಚ್.ಚಂದ್ರು ಎಂಬುವವರು ಸೋಮವಾರ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಬುಧವಾರ ಆಸ್ಪತ್ರೆ ಮುಂದೆ ಜಮಾಯಿಸಿದ ರೋಗಿಗಳ ಸಂಬಂಧಿಕರು ಪ್ರತಿಭಟನೆ ನಡೆಸಿದರು. ‘ಇಲ್ಲಿ ಡಯಾಲಿಸಿಸ್‌ಗೆ ಒಳಗಾದ ಬಹುತೇಕರಲ್ಲಿ ಹೆಪಟೈಟಿಸ್‌ ಸಿ ವೈರಸ್‌ ಕಾಣಿಸಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸೆಲ್ವರಾಜ್, ‘ಸೋಂಕು ತಗುಲಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇವರ ರಕ್ತದ ಮಾದರಿಯನ್ನು ಪುಣೆ ಮತ್ತು ಮಣಿಪಾಲ್‌ನಲ್ಲಿರುವ ಪ್ರಯೋಗಾಲಯಗಳಿಗೆ ಕಳುಹಿಸಿ ಮತ್ತೊಮ್ಮೆ ಖಚಿತಪಡಿಸಿಕೊಳ್ಳಲಾಗುವುದು. ಇದರಲ್ಲಿ ಡಯಾಲಿಸಿಸ್‌ ನಡೆಸಲು ಗುತ್ತಿಗೆ ತೆಗೆದುಕೊಂಡ ಬಿ.ಆರ್.ಶೆಟ್ಟಿ ಡಯಾಲಿಸಿಸ್‌ ಕಂಪನಿಯ ಲೋಪ ಕಂಡು ಬಂದರೆ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಲು ಸೂಚಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಡಯಾಲಿಸಿಸ್ ಪಡೆಯುತ್ತಿರುವ ಚಂದ್ರು ಎಂಬುವವರು ಪ್ರತಿಕ್ರಿಯಿಸಿ, ‘ಮೊನ್ನೆಯಷ್ಟೇ ಆಸ್ಪತ್ರೆಯಿಂದ ನರ್ಸ್‌ ಒಬ್ಬರು ಕರೆ ಮಾಡಿ ನಿಮ್ಮಲ್ಲಿ ಹೆಪಟೈಟಿಸ್ ಸೋಂಕು ಪತ್ತೆಯಾಗಿದೆ. ಇನ್ನು ಮುಂದೆ ನಿಮಗೆ ಇಲ್ಲಿ ಡಯಾಲಿಸಿಸ್ ಮಾಡಲಾಗದು ಎಂದು ತಿಳಿಸಿದರು. ಇದರ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಸರ್ಕಾರ ಇದರ ಜವಾಬ್ದಾರಿ ಹೊರಬೇಕು. ಇಲ್ಲದಿದ್ದರೆ, ನಾವು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.