
ಬೆಂಗಳೂರು: ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಪ್ರದೇಶದಲ್ಲಿರುವ ಅಕೇಶಿಯಾ ನೆಡುತೋಪನ್ನು ತೆರವು ಮಾಡಿ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
5,678 ಎಕರೆಯಷ್ಟು ವಿಸ್ತಾರವಾಗಿರುವ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಅವರು ಸ್ಥಳೀಯರು, ದನಗಾಹಿ ಮತ್ತು ಕುರಿಗಾಹಿಗಳ ಜತೆಗೆ ಮಾತುಕತೆ ನಡೆಸಿದರು. ಅರಣ್ಯೀಕರಣದ ಹೆಸರಿನಲ್ಲಿ ಅಕೇಶಿಯಾ ನೆಡುತೋಪುಗಳನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಅಕೇಶಿಯಾವು ಜಾನುವಾರುಗಳಿಗೆ ಮೇವಾಗಿಯೂ ಉಪಯೋಗವಾಗುವುದಿಲ್ಲ, ಪಕ್ಷಿಗಳಿಗೆ ಆಹಾರವನ್ನೂ ಒದಗಿಸುವುದಿಲ್ಲ. ಬದಲಿಗೆ ಸ್ಥಳೀಯ ಸಸ್ಯ ಪ್ರಭೇದಗಳನ್ನು ನಾಶಪಡಿಸುತ್ತವೆ. ಹೀಗಾಗಿ ಈ ನೆಡುತೋಪುಗಳನ್ನು ತೆರವು ಮಾಡಿ, ಹುಲ್ಲುಗಾವಲು ಬೆಳೆಸಲು ಕ್ರಮ ತೆಗೆದುಕೊಳ್ಳಿ. ಅಗತ್ಯವಿರುವೆಡೆ, ಪಕ್ಷಿಗಳಿಗೆ ಅನುಕೂಲವಾಗುವಂತೆ ಕಾಡುಹಣ್ಣಿನ ಸಸಿಗಳನ್ನು ಹಾಕಿ’ ಎಂದು ನಿರ್ದೇಶನ ನೀಡಿದರು.
‘10 ಲಕ್ಷ ಜನರಿಗೆ ನೀರು ಪೂರೈಸುವ ಸಾಮರ್ಥ್ಯವಿರುವ ಹೆಸರಘಟ್ಟ ಕೆರೆಗೆ ಗೃಹ ಮತ್ತು ಕೈಗಾರಿಕಾ ಕೊಳಚೆ ನೀರು ಹಾಗೂ ತ್ಯಾಜ್ಯ ಸೇರದಂತೆ ಎಚ್ಚರವಹಿಸಬೇಕು. ಅರ್ಕಾವತಿ ನದಿಯೂ ಮಲಿನವಾಗುವುದನ್ನು ತಡೆಯಬೇಕು. ಈ ಕಾರ್ಯಗಳಿಗೆ ಜಲಮಂಡಳಿ, ಸ್ಥಳೀಯ ಸಂಸ್ಥೆಗಳ ಅನುದಾನ ಹಾಗೂ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಬಳಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಿ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ಅವರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.