ADVERTISEMENT

ಶಬ್ಧ ಮಾಪನಗಳ ವಿವರ ಕೊಡಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 3:32 IST
Last Updated 23 ಜೂನ್ 2021, 3:32 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿ ಮತ್ತು ಇಡೀ ರಾಜ್ಯಕ್ಕೆ ಅಗತ್ಯ ಇರುವ ಶಬ್ಧ ಮಾಪನ ಸಾಧನಗಳ ವಿವರ ಒಳಗೊಂಡ ಅಫಿಡವಿಟ್‌ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ(ಡಿಜಿಪಿ) ಹೈಕೋರ್ಟ್ ನಿರ್ದೇಶನ ನೀಡಿದೆ.

ಶಬ್ಧ ಮಾಲಿನ್ಯ ನಿಯಂತ್ರಣ ನಿಯಮಗಳ ಅನುಷ್ಠಾನ ಕುರಿತ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ನಿಯಮ ಅನುಷ್ಠಾನ ಸಂಬಂಧ ಸಮಗ್ರ ಮಧ್ಯಂತರ ನಿರ್ದೇಶನ ನೀಡುವ ಮೊದಲು ರಾಜ್ಯಕ್ಕೆ ಅಗತ್ಯ ಇರುವ ಶಬ್ಧ ಮಾಪನ ಸಾಧನಗಳ ಅಗತ್ಯವಿದೆ ಎಂಬ ವಿವರ ಬೇಕಾಗುತ್ತದೆ. ಹೀಗಾಗಿ ವರದಿ ಸಲ್ಲಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ಪೀಠ ಕೇಳಿತ್ತು. ವರದಿ ಸಲ್ಲಿಸಿದ್ದ ಡಿಜಿಪಿ ಪ್ರವೀಣ್ ಸೂದ್ ಅವರು, ‘ರಾಜ್ಯದಲ್ಲಿ 143 ಡಿವೈಎಸ್‌ಪಿ ಮತ್ತು ಎಸಿಪಿಗಳಿದ್ದು, ತಲಾ ಒಂದರಂತೆ ಅಗತ್ಯಕ್ಕೆ ತಕ್ಕಷ್ಟು ಮಾಪನಗಳಿವೆ’ ಎಂದು ತಿಳಿಸಿದ್ದರು.

ADVERTISEMENT

‘ಡಿವೈಎಸ್‌ಪಿ ಮತ್ತು ಎಸಿಪಿ ವ್ಯಾಪ್ತಿಯಲ್ಲಿ ಹಲವು ಪೊಲೀಸ್ ಠಾಣೆಗಳು ಇರುತ್ತವೆ. ಅಗತ್ಯಕ್ಕೆ ತಕ್ಕಷ್ಟು ಮಾಪನಗಳು ಇವೆ ಎಂಬ ಡಿಜಿಪಿ ನಿಲುವು ಹಾಸ್ಯಾಸ್ಪದ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಶಬ್ಧ ಮಾಪನ ಸಾಧನ ಲಭ್ಯವಿಲ್ಲದ ಕಾರಣ ನಿಯಮಗಳ ಅನುಷ್ಠಾನ ಸಾಧ್ಯವಾಗಿಲ್ಲ ಎಂಬ ಗಂಭೀರ ಅಂಶವನ್ನು ಡಿಜಿಪಿ ಗಮನಿಸಬೇಕು. ಬಿಬಿಎಂಪಿ ವ್ಯಾಫ್ತಿಯನ್ನು ಸೇರಿ ನಿರ್ದಿಷ್ಟವಾಗಿ ಎಷ್ಟು ಮಾಪನಗಳ ಅಗತ್ಯವಿದೆ ಎಂಬುದನ್ನು ತಿಳಿಸಬೇಕು’ ಎಂದು ನಿರ್ದೇಶನ ನೀಡಿತು.

ಆದೇಶದ ಪ್ರತಿಯನ್ನು ಕೂಡಲೇ ಎಡಿಜಿಪಿಗೆ ರವಾನಿಸುವಂತೆ ಅಡ್ವೊಕೇಟ್ ಜನರಲ್ ಕಚೇರಿಗೆ ನಿರ್ದೇಶನ ನೀಡಿದ ಪಿಠ, ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.