
ಬೆಂಗಳೂರು: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆ ಮುಂದಿನ ಎರಡು ತಿಂಗಳು ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಧಾರವಾಡ ಜಿಲ್ಲಾಧಿಕಾರಿ (ಡಿ ಸಿ) ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಮಂಗಳವಾರ ಪ್ರಕಟಿಸಿತು.
‘ಸ್ವಾಮೀಜಿ ಎರಡು ತಿಂಗಳವರೆಗೆ ಧಾರವಾಡ ಜಿಲ್ಲೆ ಪ್ರವೇಶಿಸುವುದನ್ನು ತಡೆಹಿಡಿಯುವುದಕ್ಕೆ ಸಮರ್ಥನೀಯ ಅಂಶಗಳನ್ನು ಸರ್ಕಾರ ದಾಖಲಿಸಿಲ್ಲ. ಮೇಲ್ನೋಟಕ್ಕೆ ಸರ್ಕಾರದ ಆದೇಶ ಸಹಜ ನ್ಯಾಯದ ತತ್ವಗಳಿಗೆ ವಿರುದ್ಧವಾದ ನಿರ್ದಯ ಮನೋಭಾವನೆ ಹೊಂದಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಕನೇರಿ ಸ್ವಾಮೀಜಿ ಸಮಾಜದಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿರುವ ಮಠಾಧೀಶರು. ಗೌರವಾದರ ಹೊಂದಿರುವ ಆಧ್ಯಾತ್ಮಿಕ ನಾಯಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವುದು ದುರದೃಷ್ಟಕರ. ಆದಾಗ್ಯೂ, ಸಂವಿಧಾನದ 19(1)(ಡಿ) ವಿಧಿಯಡಿ ಖಾತರಿಪಡಿಸಲಾದ ಮೂಲಭೂತ ಹಕ್ಕಿನ ವ್ಯಾಪ್ತಿಯು ಪ್ರತಿಯೊಬ್ಬ ನಾಗರಿಕನಿಗೆ ಭಾರತದ ಭೂ ಪ್ರದೇಶದಾದ್ಯಂತ ಮುಕ್ತವಾಗಿ ಚಲಿಸುವ ಹಕ್ಕನ್ನು ನೀಡುತ್ತದೆ’ ಎಂಬುದನ್ನು ನ್ಯಾಯಪೀಠ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.