ADVERTISEMENT

ಟ್ವಿಟರ್‌: ಕೇಂದ್ರದ ನಿಲುವು ತಿಳಿಸಲು ಅ.4ರವರೆಗೆ ಹೈಕೋರ್ಟ್‌ ಗಡುವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 16:36 IST
Last Updated 27 ಸೆಪ್ಟೆಂಬರ್ 2023, 16:36 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ಕೆಲವು ವೈಯಕ್ತಿಕ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲು ಎಕ್ಸ್‌ ಕಾರ್ಪ್ (ಹಿಂದಿನ ಟ್ವಿಟರ್) ಕಂಪನಿಗೆ ಸೂಚಿಸಿದ ಆದೇಶ ಮರು ಪರಿಶೀಲಿಸುವ ವಿಚಾರದಲ್ಲಿನ ನಿಮ್ಮ ನಿಲುವು ತಿಳಿಸಿ‘ ಎಂಬ ನಿರ್ದೇಶನಕ್ಕೆ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌, ಅಕ್ಟೋಬರ್ 4ರವರೆಗೆ ಕಾಲಾವಕಾಶ ನೀಡಿದೆ.

ಈ ಸಂಬಂಧ ಎಕ್ಸ್‌ ಕಾರ್ಪ್ (ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ವಿಜಯಕುಮಾರ್‌ ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್. ಕುಮಾರ್‌, ‘ನಿರ್ಬಂಧದ ಆದೇಶವನ್ನು ಪರಿಶೀಲನೆ ನಡೆಸುವ ಕುರಿತು ನಿಲುವು ತಿಳಿಸುವಂತೆ ಇದೇ 20ರಂದು ನ್ಯಾಯಪೀಠ ಸೂಚಿಸಿದೆ. ಆದರೆ, ಈ ನಿಟ್ಟಿನಲ್ಲಿನ ಕೆಲವು ವಿಚಾರಗಳನ್ನು ಇನ್ನೂ ನಿರ್ಧರಿಸಬೇಕಿದ್ದು, ಅದಕ್ಕಾಗಿ ಮೂರು ವಾರಗಳ ಕಾಲಾವಕಾಶ ನೀಡಬೇಕು‘ ಎಂದು ಕೋರಿದರು.

ಮೂರು ವಾರಗಳ ಕಾಲಾವಕಾಶ ನೀಡಲು ನಿರಾಕರಿಸಿದ ನ್ಯಾಯಪೀಠ, ಅಕ್ಟೋಬರ್ 4ಕ್ಕೆ ವಿಚಾರಣೆ ಮುಂದೂಡಿ, ಅಷ್ಟರೊಳಗೆ ನಿಮ್ಮ ನಿಲುವು ತಿಳಿಸಿ‘ ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.

ಕೆಲವು ವೈಯಕ್ತಿಕ ಖಾತೆಗಳ ಮೇಲೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ 2021ರ ಫೆಬ್ರುವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಈ ಮೇಲ್ಮನವಿ ಸಲ್ಲಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.