
ಬೆಂಗಳೂರು: ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್’ ಕಂಪನಿಯ ಮಾಜಿ ಆಡಳಿತ ಮಂಡಳಿಯು, ಕಂಪನಿಯನ್ನು ಮುಚ್ಚುವ ಮೊದಲು ತನ್ನ ಬಳಿಯಿದ್ದ ಬಹುಕೋಟಿ ಮೌಲ್ಯದ 6 ಎಕರೆ 29 ಗುಂಟೆ ಜಮೀನು ಮತ್ತು ಆಸ್ತಿಗಳನ್ನು ತನ್ನದೇ ಶಿಕ್ಷಣ ಸಂಸ್ಥೆಯಾಗಿರುವ, ‘ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್’ಗೆ (ಕೆಐಎಎಂಎಸ್) ವರ್ಗಾಯಿಸುವ ಮೂಲಕ ‘ಗುತ್ತಿಗೆ ಪತ್ರ (ಲೀಸ್ ಡೀಡ್) ಕಾರ್ಯಗತಗೊಳಿಸಿರುವುದು ಕಾನೂನು ಬಾಹಿರ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕಂಪನಿ ನ್ಯಾಯಾಲಯ 2015ರ ಜುಲೈ 21ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ, ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಕಂಪನಿ’ಯ ‘ಅಧಿಕೃತ ಲಿಕ್ವಿಡೇಟರ್’ (ಬರ್ಖಾಸ್ತುದಾರ) ಸಲ್ಲಿಸಿದ್ದ ‘ಮೂಲ ಮೇಲ್ಮನವಿ’ಯನ್ನು (ಒಎಸ್‌ಎ) ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.
ಈ ಕುರಿತಾದ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದ್ದು, ‘ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಹರಾಜಿಗೆ ಇರಿಸಿ’ ಎಂದು ಮೇಲ್ಮನವಿದಾರರೂ ಆದ ಹೈಕೋರ್ಟ್‌ನಿಂದ ನೇಮಕಗೊಂಡಿರುವ ಅಧಿಕೃತ ಲಿಕ್ವಿಡೇಟರ್‌ಗೆ (ಒಎಲ್) ನಿರ್ದೇಶಿಸಿದೆ.
‘ಮುಚ್ಚುವ ಹಂತದಲ್ಲಿದ್ದ ಕಂಪನಿಯು ತನ್ನ ಸಾಲಗಾರರು ಮತ್ತು ಷೇರುದಾರರ ಹಿತಾಸಕ್ತಿ ಬಲಿಕೊಟ್ಟು, ಕೇವಲ ತನಗೆ ಸಂಬಂಧಿಸಿದ ಸಂಸ್ಥೆಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಈ ಲೀಸ್ ಡೀಡ್ ಕಾರ್ಯಗತಗೊಳಿಸಿದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ‘ಕೂಡಲೇ ಆಸ್ತಿಯನ್ನು ವಶಕ್ಕೆ ಪಡೆದು ಸಾರ್ವಜನಿಕ ಹರಾಜು ಮೂಲಕ ಬಾಕಿದಾರರಿಗೆ ಹಣ ಮರುಪಾವತಿಸಬೇಕು’ ಎಂದು ಲಿಕ್ವಿಡೇಟರ್‌ಗೆ ತಾಕೀತು ಮಾಡಿದೆ.
ಅಂತೆಯೇ, ‘ಅಧಿಕೃತ ಲಿಕ್ವಿಡೇಟರ್, ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವತನಕ ಕೆಐಎಎಂಎಸ್ ತನ್ನ ಸ್ವಾಧೀನದಲ್ಲಿರುವ ಸ್ವತ್ತುಗಳ ಮಾರುಕಟ್ಟೆ ಬಾಡಿಗೆಯನ್ನು ಪಾವತಿಸಲು ಬಾಧ್ಯಸ್ಥವಾಗಿರುತ್ತದೆ. ಒಂದು ವೇಳೆ ಕೆಐಎಎಂಎಸ್ ಬಯಸಿದರೆ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲೂ ಭಾಗವಹಿಸಬಹುದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕಂಪನಿ ನ್ಯಾಯಾಲಯ 2004ರ ಏಪ್ರಿಲ್ 1ರಂದು ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಕಂಪನಿಯನ್ನು ಮುಕ್ತಾಯಗೊಳಿಸಲು ಆದೇಶಿಸಿತ್ತು. ಈ ಆದೇಶ ಹೊರಬೀಳುವ ಮೊದಲು ಅಂದರೆ 2000 ಜನವರಿ 22ರಂದು, ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್‌ನ ಮಾಜಿ ಆಡಳಿತ ಮಂಡಳಿ’ ಕೆಐಎಎಂಎಸ್ ಜೊತೆಗಿನ ಆಸ್ತಿ ವರ್ಗಾವಣೆಯ 28 ವರ್ಷಗಳ ಗುತ್ತಿಗೆ ಒಪ್ಪಂದವನ್ನು ಜಾರಿಗೊಳಿಸಿತ್ತು.
ತದನಂತರ ಕೆಐಎಎಂಎಸ್, ಹರಿಹರ ತಾಲ್ಲೂಕಿನ ಸರ್ವೇ ನಂಬರ್ 23 ಮತ್ತು 27ರ ವ್ಯಾಪ್ತಿಯಲ್ಲಿ ಒಟ್ಟು 6 ಎಕರೆ, 29 ಗುಂಟೆ ಜಮೀನನ್ನು ಹಾಗೂ ಈ ಜಮೀನಿನಲ್ಲಿರುವ ಕಟ್ಟಡಗಳು, ರಚನೆಗಳು, ಸೌಲಭ್ಯಗಳು, ಸೌಕರ್ಯಗಳು, ಸ್ಥಾವರಗಳು ಮತ್ತು ಯಂತ್ರೋಪಕರಣಗಳನ್ನು ತನ್ನ ವಶಕ್ಕೆ ಪಡೆದಿತ್ತು. ಬಹುಕೋಟಿ ಮೌಲ್ಯದ ಈ ಆಸ್ತಿಯನ್ನು ತಿಂಗಳಿಗೆ ₹1,250ರ ಮೊತ್ತಕ್ಕೆ ಗುತ್ತಿಗೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.