
ಬೆಂಗಳೂರು: ‘ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಮರು ಪರಿಶೀಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ನಮ್ಮ ಜಮೀನಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಮಾರಪ್ಪ ಗಾರ್ಡನ್ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತು ಆದೇಶಿಸಿದೆ.
‘ಪ್ರಸ್ತಾವಿತ ಎಕ್ಸ್‌ಪ್ರೆಸ್–ವೇ ನಲ್ಲಿನ ಒಟ್ಟು 111 ಕಿ.ಮೀಗಳಲ್ಲಿ ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿ.ಮೀ ರಸ್ತೆ ಮಾತ್ರ ನಿರ್ಮಿಸಲಾಗಿದೆ ಮತ್ತು 1995ರಲ್ಲಿ ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಯೋಜಿಸಲಾದ ಐದು ಪಟ್ಟಣಗಳಲ್ಲಿ ಈತನಕ ಯಾವುದೇ ಪ್ರಗತಿ ಕಂಡಿಲ್ಲ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
‘ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಮಾರ್ಗವನ್ನು ಭವಿಷ್ಯದಲ್ಲಿಯೂ ನಿರ್ಮಿಸುವ ಯಾವುದೇ ಸೂಚನೆ ಕಾಣಿಸುತ್ತಿಲ್ಲ. ಆದ್ದರಿಂದ, ಯೋಜನೆಯನ್ನು ಮರು ಪರಿಶೀಲಿಸಬೇಕು ಮತ್ತು ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
‘1995ರ ಯೋಜನಾ ತಾಂತ್ರಿಕ ವರದಿ (ಪಿಟಿಆರ್) ಗಮನಿಸಿದಾಗ, ಒಂದು ಸುಂದರ ಮತ್ತು ಭವಿಷ್ಯದ ಪರಿಕಲ್ಪನೆಯನ್ನು ನಾಗರಿಕರು ಮತ್ತು ಪರಿಸರದ ಹೆಸರಿನಲ್ಲಿ ಮಾಡಿದ ವೆಚ್ಚದಲ್ಲಿ ಕೊಲ್ಲಲಾಗಿದೆ. ಹಾಗಾಗಿ, ಹಳೆಯ ಯೋಜನೆಯನ್ನು ಕೈಬಿಟ್ಟು ಹೊಸ ಯೋಜನೆ ಆರಂಭಕ್ಕೆ ಕ್ರಮ ತೆಗೆದುಕೊಳ್ಳುವುದು ಸೂಕ್ತ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ನಗರದ ಜನಸಂಖ್ಯೆಯನ್ನು 70 ಲಕ್ಷಕ್ಕೆ ಇಳಿಸಲು ಮತ್ತು ಬೆಂಗಳೂರು–ಮೈಸೂರು ನಡುವೆ ಐದು ಪಟ್ಟಣಗಳನ್ನು ರಚಿಸುವ ಮೂಲಕ ನಗರದ ದಟ್ಟಣೆಯನ್ನು ಕಡಿಮೆ ಮಾಡಲು 1995ರಲ್ಲಿ ಪಿಟಿಆರ್ ಸಿದ್ಧಪಡಿಸಲಾಗಿತ್ತು, 2011ರ ವೇಳೆಗೆ ನಗರದ ಜನಸಂಖ್ಯೆ 85 ಲಕ್ಷವನ್ನು ದಾಟುತ್ತದೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ, ಬಿಎಂಐಸಿ ಯೋಜನೆಯಡಿ ಕಳೆದ 30 ವರ್ಷಗಳಿಂದ ಕೇವಲ 47 ಕಿ.ಮೀ ಪೆರಿಫೆರಲ್ ರಸ್ತೆಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿದೆ.
‘ಉತ್ತಮ ನಾಗರಿಕ ಸೌಲಭ್ಯಗಳ ಜೊತೆಗೆ ವ್ಯಾಪಾರ ಮತ್ತು ವೃತ್ತಿಪರರಿಗೆ ಉತ್ತಮ ಅವಕಾಶಗಳನ್ನು ಒದಗಿಸಿ ಮಹಾನಗರದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಂಐಸಿ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಉದ್ದೇಶವು ಕನಸಾಗಿಯೇ ಉಳಿದಿದೆ. ಕಳೆದ 25 ವರ್ಷಗಳಲ್ಲಿ ಟೋಲ್ ಪ್ಲಾಜಾ ಮತ್ತು ಪೆರಿಫೆರಲ್ ರಸ್ತೆಗಳನ್ನು ಹೊರತುಪಡಿಸಿ ಕೇವಲ ಒಂದು ಕಿ.ಮೀ ಎಕ್ಸ್‌ಪ್ರೆಸ್ ಮಾರ್ಗವನ್ನು ನಿರ್ಮಿಸಲಾಗಿದೆ’ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ಅಧಿಕಾರದಲ್ಲಿರುವ ಜನರು ಸಾರ್ವಜನಿಕ ಯೋಜನೆಗೆ ಬದ್ಧರಾಗಿಲ್ಲ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ’ ಎಂದು ಉಲ್ಲೇಖಿಸಿರುವ ನ್ಯಾಯಪೀಠ ‘ಯೋಜನೆಯ ಪ್ರತಿಪಾದಕರಾದ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೈಸ್) ಮತ್ತು ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ (ಎನ್‌ಇಸಿಇಎಲ್) ಕೇವಲ ಬಾಹ್ಯ ರಸ್ತೆಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಮಿಸುವ ಮೂಲಕ ಭಾರಿ ಟೋಲ್‌ಗಳನ್ನು ಸಂಗ್ರಹಿಸುತ್ತಿವೆ’ ಎಂದು ನ್ಯಾಯಪೀಠ ಆಶ್ಚರ್ಯ ವ್ಯಕ್ತಪಡಿಸಿದೆ. ‘ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತು ಮೂಲಸೌಕರ್ಯ ಕಾರಿಡಾರ್ ಯೋಜನೆ ಕೇವಲ ಕಾಗದಗಳಲ್ಲಿ ಮಾತ್ರ ಉಳಿದಿದೆ. ಯೋಜನೆ ನಿರ್ಮಾಣ ಮಾಡಿ ಅದನ್ನು ಅನುಷ್ಠಾನಕ್ಕೆ ತರಬೇಕಾದವರು ಭಾರಿ ಪ್ರಮಾಣದಲ್ಲಿ ಜಮೀನನ್ನು ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದಾರೆ’ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಬೆಂಗಳೂರು ಮಹಾನಗರದ ಜನಸಂಖ್ಯೆ ಈಗ 1.40 ಕೋಟಿಗಿಂತ ಹೆಚ್ಚಾಗಿದೆ. ಸಂಚಾರ ದಟ್ಟಣೆ ಸಾಮಾನ್ಯ ಎನ್ನುವಂತಾಗಿದೆ. ನಗರದೊಳಗೆ ಸ್ವಲ್ಪ ದೂರ ಪ್ರಯಾಣಿಸಲೂ ಗಂಟೆಗಟ್ಟಲೆ ವ್ಯಯ ಮಾಡಬೇಕಾಗಿದೆ. ಮೂಲಸೌಕರ್ಯ ಅಗತ್ಯ ಸೌಲಭ್ಯಗಳು ಕುಸಿಯುತ್ತಿವೆ. ಇದು ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ನಗರದ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ಹೊಸ ಯೋಜನೆಯೊಂದಕ್ಕೆ ಅಗತ್ಯವಾದ ನಿರ್ಧಾರ ತೆಗೆದುಕೊಳ್ಳಬೇಕು’ ನ್ಯಾಯಪೀಠ ಸೂಚಿಸಿದೆ. ‘ಈ ಯೋಜನೆಗಾಗಿ ಸರ್ಕಾರ 1997ರಲ್ಲಿ ನೈಸ್ ಜೊತೆ ಫ್ರೇಮ್ ವರ್ಕ್ ಅಗ್ರಿಮೆಂಟ್‌ಗೆ (ಎಫ್‌ಡಬ್ಲ್ಯೂಎ) ಸಹಿ ಹಾಕಿರುವುದನ್ನು ಎತ್ತಿ ತೋರಿಸಿರುವ ನ್ಯಾಯಪೀಠ ‘ವಾಸ್ತವದಲ್ಲಿ ಈ ಹಿಂದಿನ ಪರಿಕಲ್ಪನೆ ಮತ್ತು ಒಪ್ಪಂದ ಎರಡಕ್ಕೂ ನಿರಾಶೆ ಕವಿದಿದೆ. ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಹೊಸ ಯೋಜನೆಯ ಅಗತ್ಯವಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.