ADVERTISEMENT

ಗಾಂಧಿ ಬಜಾರ್‌ ಆಧುನೀಕರಣ ಪ್ರಶ್ನಿಸಿದ್ದ ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 15:43 IST
Last Updated 3 ಜನವರಿ 2025, 15:43 IST
<div class="paragraphs"><p>ಹೈಕೋರ್ಟ್‌&nbsp;</p></div>

ಹೈಕೋರ್ಟ್‌ 

   

ಬೆಂಗಳೂರು: ‘ಗಾಂಧಿ ಬಜಾರ್‌ ಮಾರುಕಟ್ಟೆ ಬೀದಿಯ ಮರು ವಿನ್ಯಾಸ ಯೋಜನೆ’ ಪ್ರಶ್ನಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಸಂಬಂಧ, ‘ಹೆರಿಟೇಜ್‌ ಬಸವನಗುಡಿ ರೆಸಿಡೆಂಟ್ಸ್‌ ವೆಲ್ಫೇರ್‌ ಫೋರಂ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಯೋಜನೆಯ ಅನುಷ್ಠಾನ 2022ರ ಡಿಸೆಂಬರ್‌ನಲ್ಲೇ ಆರಂಭವಾಗಿದೆ. ಈಗಾಗಲೇ ಶೇ 95ರಷ್ಟು ಪೂರ್ಣಗೊಂಡಿದೆ. ಇದಕ್ಕಾಗಿ ₹ 24.88 ಕೋಟಿ ವ್ಯಯಿಸಲಾಗಿದೆ. ಬಾಕಿ ಉಳಿದಿರುವ ಶೇ 5ರಷ್ಟು ಕಾಮಗಾರಿ 2025ರ ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಈ ಹಂತದಲ್ಲಿ ಯೋಜನೆಗೆ ಯಾವುದೇ ಮಾರ್ಪಾಡು ಮಾಡಲು ನಿರ್ದೇಶಿಸಿದರೆ ಅದರಿಂದ ತೊಂದರೆ ಉಂಟಾಗಲಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಸಾರ್ವಜನಿಕರ ಹಿತಾಸಕ್ತಿ ಹಾಗೂ ಅನುಕೂಲಕ್ಕಾಗಿಯೇ ಈ ಯೋಜನೆ ಜಾರಿಗೊಳಿಸುತ್ತಿರುವ ಕಾರಣ ಯೋಜನೆ ಜಾರಿ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗದು’ ಎಂದು ನ್ಯಾಯಪೀಠ ಅರ್ಜಿ ವಜಾಕ್ಕೆ ಕಾರಣ ನೀಡಿದೆ.

ಅರ್ಜಿಯಲ್ಲಿ ಏನಿತ್ತು?:

‘ಉದ್ದೇಶಿತ ಯೋಜನೆಯಿಂದ 90 ಅಡಿ ಅಗಲದ ಗಾಂಧಿ ಬಜಾರ್‌ ಮುಖ್ಯ ರಸ್ತೆಯು 23 ಅಡಿಗೆ ಕುಂಠಿತಗೊಳ್ಳಲಿದೆ. ಪಾದಚಾರಿ ಮಾರ್ಗ ವಿಸ್ತೃತಗೊಂಡು, ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ರಸ್ತೆಯ ವೈಟ್‌ ಟಾಪಿಂಗ್‌ ಮತ್ತು ಆಧುನೀಕರಣವೂ ವೈಜ್ಞಾನಿಕವಾಗಿಲ್ಲ. ಆಧುನೀಕರಣದ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ತಪ್ಪಾದ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಆದ್ದರಿಂದ, ಈ ಯೋಜನೆಯನ್ನು ಅವೈಜ್ಞಾನಿಕ ಎಂದು ಘೋಷಿಸಬೇಕು. ಯೋಜನೆ ಜಾರಿ ಮಾಡದಂತೆ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.