
ಬೆಂಗಳೂರು: ‘ಹೈಕೋರ್ಟ್ ಕಟ್ಟಡದ ನೂತನ ಸಂಕೀರ್ಣ ನಿರ್ಮಾಣಕ್ಕಾಗಿ ಬೆಂಗಳೂರಿನ ಹೃದಯ ಭಾಗದಲ್ಲಿ 30 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಮೀನನ್ನು ನೀಡಲು ನಿರ್ದೇಶನ ನೀಡಬೇಕು’ ಎಂದು ಕೋರಲಾಗಿರುವ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.
ಈ ಸಂಬಂಧ ಅಫಜಲಪೂರ ಕ್ಷೇತ್ರದ ಮಾಜಿ ಶಾಸಕ ಹಣಮಂತರಾವ್ ದೇಸಾಯಿ ಅವರ ಪುತ್ರ ಶರಣ್ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಾಸ್ತುಶಿಲ್ಪಿಯಾಗಿ ಅಮೆರಿಕೆಯಲ್ಲಿ ಕಾರ್ಯ ನಿರ್ವಹಿಸಿರುವ ಶರಣ್ ದೇಸಾಯಿ ವಿಚಾರಣೆ ವೇಳೆ ಸ್ವತಃ ವಾದ ಮಂಡಿಸಿದರು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿತು.
ಅರ್ಜಿದಾರರ ಉಲ್ಲೇಖ: ‘ಕಬ್ಬನ್ ಪಾರ್ಕ್‌ನಲ್ಲಿ 2025ರ ಅಕ್ಟೋಬರ್ 26ರಂದು ನಡೆದ ‘ವಾಕ್ ವಿಥ್ ಬೆಂಗಳೂರು‘ ನಾಗರಿಕ ಸಂಪರ್ಕ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಕರ್ನಾಟಕ ಹೈಕೋರ್ಟ್‌ನ ಈಗಿರುವ ಕಟ್ಟಡ ಸ್ಥಳಾವಕಾಶದ ಕೊರತೆ ಎದುರಿಸುತ್ತಿದೆ. ಹಾಗಾಗಿ, ಈ ಕಟ್ಟಡವನ್ನು ನಗರದ ಪ್ರಮುಖ ಭಾಗದಲ್ಲಿನ ಹೊಸ ಮತ್ತು ವಿಶಾಲವಾದ ಜಾಗಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ’ ಎಂಬ ವರದಿಯನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.