ADVERTISEMENT

ಆನ್‌ಲೈನ್ ಜೂಜು ನಿಷೇಧ ಕಾಯ್ದೆ ತಿದ್ದುಪಡಿ ರದ್ದುಪಡಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 20:51 IST
Last Updated 14 ಫೆಬ್ರುವರಿ 2022, 20:51 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ಆನ್‌ಲೈನ್ಜೂಜುನಿಷೇಧಿಸಿ ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ‘ಆನ್ ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಹೊಸ ಕಾಯ್ದೆ ತರಲು ಈ ತೀರ್ಪು ಯಾವುದೇ ತಡೆ ಒಡ್ಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ತಿದ್ದುಪಡಿ ರದ್ದು ಕೋರಿ ‘ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಆಫ್ ಇಂಡಿಯಾ’ ಹಾಗೂ ‘ಗ್ಯಾಲಕ್ಟಸ್ ಫನ್‌ವೇರ್ ಟೆಕ್ನಾಲಜೀಸ್’ ಸೇರಿದಂತೆ ಹಲವು ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ಅವಸ್ಥಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠಮಾನ್ಯ ಮಾಡಿ ಸೋಮವಾರ ಈ ಕುರಿತ ತೀರ್ಪು ಪ್ರಕಟಿಸಿದೆ.

ತಿದ್ದುಪಡಿ ಕಾಯ್ದೆಯನ್ನು 2021ರ ಸೆಪ್ಟೆಂಬರ್ 21ರಂದು ವಿಧಾನಸಭೆ ಮತ್ತು ಅದೇ ತಿಂಗಳ 23ರಂದು ವಿಧಾನಪರಿಷತ್ ಅಂಗೀಕರಿಸಿತ್ತು. 2021ರ ಅಕ್ಟೋಬರ್ 4ರಂದು ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದರು. ಅಕ್ಟೋಬರ್ 5ರಂದು ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿತ್ತು. 2021ರ ಡಿಸೆಂಬರ್ 22ರಂದು ವಿಚಾರಣೆ ಪೂರ್ಣಗೊಳಿಸಿದ್ದ ವಿಭಾಗೀಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.

ADVERTISEMENT

ರಾಜ್ಯದ ಒಳಗೆ ಮತ್ತು ಗಡಿಭಾಗದಲ್ಲಿನ ಜೂಜಾಟ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕರ್ನಾಟಕ ಪೊಲೀಸ್ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು.

₹50 ಲಂಚಕ್ಕೆ ಕಡ್ಡಾಯ ನಿವೃತ್ತಿ ಪುನರ್ ಪರಿಶೀಲಿಸಲು ಆದೇಶ

ಬೆಂಗಳೂರು: ‘ಹದಿನೆಂಟು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಸರ್ಕಾರಿ ಉದ್ಯೋಗಿ ₹50 ಲಂಚ ಪಡೆದಿದ್ದರು ಎಂಬ ಕಾರಣಕ್ಕೆ ಅವರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ ನೀಡಿರುವುದು ತರವಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತಂತೆ ಎಂ.ಎಸ್ ಕಡಕೋಳ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಹಾಗೂ ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗ್ಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಶಿಕ್ಷೆ ರದ್ದುಪಡಿಸಿದ್ದು, ‘ಪ್ರಕರಣವನ್ನು ಪುನಃ ಪರಿಗಣಿಸಿ ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಿ’ ಎಂದು ಶಿಸ್ತು ಪ್ರಾಧಿಕಾರಕ್ಕೆ ಆದೇಶಿಸಿದೆ.

ಏನಿದು ಪ್ರಕರಣ?:
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಾಚಾರಿ ಎಂಬುವರನ್ನು 1998ರಲ್ಲಿ ಬ್ಯಾಡಗಿಯಿಂದ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿತ್ತು. ‘ಈ ವರ್ಗಾವಣೆ ಕಡತವನ್ನು ವಿಲೇವಾರಿ ಮಾಡಲು ₹ 150 ಲಂಚ ಕೇಳಿದ್ದಾರೆ‘ ಎಂದು ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ₹ 50 ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 7, 13(1) ಹಾಗೂ 13(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖಾಧಿಕಾರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ ಬಳಿಕ ಶಿಸ್ತು ಪ್ರಾಧಿಕಾರ 2004ರ ಸೆಪ್ಟೆಂಬರ್ 7ರಂದು ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಪ್ರಶ್ನಿಸಲಾಗಿತ್ತು. ಕೆಎಟಿ ಈ ಅರ್ಜಿಯನ್ನು 2016ರ ಜೂನ್ 1ರಂದು ತಿರಸ್ಕರಿಸಿತ್ತು. ಕೆಎಟಿ ಆದೇಶ ಪ್ರಶ್ನಿಸಿ ಕಡಕೋಳ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.