ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ
ಬೆಂಗಳೂರು: ‘ಅನಕ್ಷರತೆ ಎಂಬುದು ಬಾಲ್ಯ ವಿವಾಹದಂತಹ ಗಂಭೀರ ಪ್ರಕರಣಗಳನ್ನು ರದ್ದುಪಡಿಸಲು ಆಧಾರ ಎನಿಸುವುದಿಲ್ಲ’ ಎಂದು ಹೈಕೋರ್ಟ್, ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ವೇಳೆ ಮತ್ತೊಮ್ಮೆ ಕಿಡಿ ಕಾರಿದೆ.
‘ನಮ್ಮ ವಿರುದ್ಧದ ಎಫ್‌ಐಆರ್ ಮತ್ತು ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸೆಷನ್ಸ್ (ಎಫ್‌ಟಿಎಸ್ಸಿ ವಿಶೇಷ) ಕೋರ್ಟ್‌ನಲ್ಲಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಗೌರಿಬಿದನೂರು ತಾಲ್ಲೂಕು ಪಾಯಿಪಳ್ಳಿ ಲಕ್ಕಸಂದ್ರದ, ಅಶೋಕ (56), ಅಶ್ವತ್ಥ ನಾರಾಯಣ (55), ರಂಗಮ್ಮ (49) ರಾಮಾಂಜಿನಮ್ಮ (48) ಮತ್ತು ಶ್ರೀರಾಮಪ್ಪ (56) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಹುಡುಗ-ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ನಡೆದಾಗ ಯುವತಿಗೆ 16 ವರ್ಷ 9 ತಿಂಗಳಾಗಿತ್ತು. ದಂಪತಿಗೆ ಈಗಾಗಲೇ ಒಂದು ಮಗು ಜನಿಸಿದೆ. ಅರ್ಜಿದಾರರು ಅನಕ್ಷರಸ್ಥರು. ಇವರೆಲ್ಲಾ ವಿವಾಹವಾಗಿರುವ ಯುವಕ-ಯುವತಿಯ ಪೋಷಕರಾಗಿದ್ದಾರೆ. ತಿಳಿವಳಿಕೆ ಇಲ್ಲದೆ ಎಲ್ಲರೂ ಸೇರಿಕೊಂಡು ವಿವಾಹ ಮಾಡಿಸಿದ್ದಾರೆ. ಆದ್ದರಿಂದ, ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದರು.
ಈ ಮಾತಿಗೆ ಕೆರಳಿದ ನ್ಯಾಯಮೂರ್ತಿಗಳು, ‘ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ. ಅವರೆಲ್ಲಾ ಪ್ರಕರಣದ ವಿಚಾರಣೆಯನ್ನು ಎದುರಿಸಲೇಬೇಕು. ಈ ವಿಷಯದಲ್ಲಿ ಪೋಷಕರಿಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ’ ಎಂದು ಗುಡುಗಿದರು.
‘ಪ್ರಕರಣದಲ್ಲಿ ಮದುವೆಯಾಗಿರುವ ಯುವತಿಗೆ ಮಗು ಜನಿಸಿದೆ. ಈ ಅಂಶವನ್ನು ಪರಿಗಣಿಸಿ ಪೋಕ್ಸೊ ಕಾಯ್ದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ’ ಎಂದು ಪುನರುಚ್ಚರಿಸಿದ ನ್ಯಾಯಮೂರ್ತಿಗಳು, ಅರ್ಜಿ ಕುರಿತಂತೆ ತೀರ್ಪು ಕಾಯ್ದಿರಿಸಿ ಆದೇಶಿಸಿದರು.
ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕಿದೆ. ಈ ದಿಕ್ಕಿನಲ್ಲಿ ಪೋಷಕರು ಎಚ್ಚೆತ್ತುಕೊಳ್ಳುವುದು ಯಾವಾಗ? ಎಲ್ಲರಿಗೂ ಎಚ್ಚರಿಕೆ ಮೂಡಬೇಕಾದರೆ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲಾಗದು.ನ್ಯಾ.ಎಂ.ನಾಗಪ್ರಸನ್ನ
ಪೋಷಕರ ವಿರುದ್ಧ ಗುರುತರ ಆರೋಪ
ಅರ್ಜಿದಾರ ಪೋಷಕರ ವಿರುದ್ಧ, 16 ವರ್ಷ 9 ತಿಂಗಳ ವಯಸ್ಸಿನ ಯುವತಿಗೆ ಮದುವೆ ಮಾಡಿಸಿದ ಆರೋಪದಡಿ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅರ್ಜಿದಾರರು ಭಾರತೀಯ ದಂಡ ಸಂಹಿತೆ-1860ರ ಕಲಂ 376 (2)(ಎನ್) (ನಿರ್ದಿಷ್ಟ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012ರ (ಪೋಕ್ಸೊ) ಕಲಂ 5(ಜೆ)(II) (ಲೈಂಗಿಕ ದೌರ್ಜನ್ಯದ ಪರಿಣಾಮ ಬಾಲಕಿ ಗರ್ಭಿಣಿಯಾದರೆ) ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ–2006ರ ಕಲಂ 9,10 ಮತ್ತು 11ರ ಅಡಿಯಲ್ಲಿನ ಗುರುತರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.