
* ದಾಖಲೆ ಮೋಸ–ವಂಚನೆ ಆರೋಪ * ಇದೇ 18ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ‘ವಿಲಾಸಿ ಲ್ಯಾಂಬೋರ್ಗಿನಿ ಕಾರನ್ನು ಸುಳ್ಳು ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿ ಮಧ್ಯರಾತ್ರಿ ಮಾಲೀಕರ ಗ್ಯಾರೇಜ್‌ಗೆ ನುಗ್ಗಿ ಕಾರನ್ನು ಏಕಾಏಕಿ ಟೋಯಿಂಗ್ ಮೂಲಕ ತೆಗೆದುಕೊಂಡು ಹೋಗಿರುವ ಹಿರಿಯ ಮೋಟಾರು ವಾಹನಗಳ ನಿರೀಕ್ಷಕರೊಬ್ಬರನ್ನು (ಎಂವಿಐ) ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಈ ಸಂಬಂಧ ಕಾರಿನ ಮಾಲೀಕ ಮತ್ತು ‘ಹಾಯ್ ಕಾರ್ ಕೇರ್’ ಮುಖ್ಯಸ್ಥರೂ ಆದ ಜೆ.ರಾಮಕೃಷ್ಣಯ್ಯ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ವೆಂಕಟೇಶ ಅರಬಟ್ಟಿ, ‘ಇದೇ 7ರಂದು, ಹಿರಿಯ ಮೋಟಾರು ವಾಹನ ನಿರೀಕ್ಷಕ ಎನ್.ರಂಜಿತ್, ಅರ್ಜಿದಾರರ ಮನೆಗೆ ರಾತ್ರಿ 11.30ರ ಸಮಯದಲ್ಲಿ ನುಗ್ಗಿ ಕಾರನ್ನು ಮನೆಯ ಗ್ಯಾರೇಜ್‌ನಿಂದ ಟೋಯಿಂಗ್ ಮಾಡಿಸಿಕೊಂಡು ಹೋಗಿದ್ದಾರೆ. ನಂತರ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ, ಮೋಸ ಮಾಡಿ ವಂಚಿಸಿದ ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿದೆ’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪ್ರಾಸಿಕ್ಯೂಟರ್ ಬಿ.ಎಸ್.ಬೆಳ್ಳಿಯಪ್ಪ, ‘ಕಾರು 2022ರಲ್ಲಿಯೇ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿತ್ತು. ಆ ಹಳೆಯ ಮಾಹಿತಿಯನ್ನು ಆರ್‌ಟಿಒ ಅಧಿಕಾರಿಗಳೇ ತೆಗೆದುಹಾಕಿ, ಹೊಸ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಅರ್ಜಿದಾರರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ’ ಎಂದು ಆಕ್ಷೇಪಿಸಿದರು.
‘ಜಂಟಿ ಸಾರಿಗೆ ಆಯುಕ್ತರು ನಡೆಸಿದ ವಿಚಾರಣೆಯ ಆಧಾರದಡಿ ಅಪರಾಧವನ್ನು ದಾಖಲಿಸಲಾಗಿದೆ. ತೆರಿಗೆ ವಂಚನೆಗಾಗಿ ಅಪರಾಧವನ್ನು ನೋಂದಾಯಿಸಿದ ನಂತರ ಕಾರನ್ನು ವಶಪಡಿಸಿಕೊಳ್ಳಲು ಇನ್ಸ್‌ಪೆಕ್ಟರ್‌ಗೆ ಅಧಿಕಾರವಿದೆ’ ಎಂದು ಪ್ರತಿಪಾದಿಸಿದರು.
ಇದಕ್ಕೆ ನ್ಯಾಯಪೀಠ, ‘ನಿಮ್ಮ ಪ್ರತಿಪಾದಿತ ಅಂಶಕ್ಕೆ ಪೂರಕವಾದ ಕಾನೂನು ವ್ಯಾಖ್ಯೆಯನ್ನು ತೋರಿಸಿ’ ಎಂದು ಪ್ರಶ್ನಿಸಿತು. ‘ಇದಕ್ಕೆ ವಿವರಣೆ ನೀಡಲು ಸ್ವಲ್ಪ ಸಮಯಾವಕಾಶ ಬೇಕು’ ಎಂದು ಬೆಳ್ಳಿಯಪ್ಪ ಕೋರಿದರು.
ಈ ಕೋರಿಕೆಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಒಬ್ಬ ಹಿರಿಯ ಅಧಿಕಾರಿ ಈ ರೀತಿ ಮತ್ತೊಬ್ಬರ ಮನೆಗೆ ನುಗ್ಗಿ ರಾತ್ರೋರಾತ್ರಿ ಬೆಲೆಬಾಳುವ ಕಾರನ್ನು ಜಪ್ತಿ ಮಾಡುವುದು ಎಂದರೆ ಏನರ್ಥ? ಈ ರೀತಿ ಮಾಡಲು ಅವರಿಗೆ ಅಧಿಕಾರ ಎಲ್ಲಿದೆ? ನಿಮ್ಮ ಮನೆಗೆ ಯಾರಾದರೂ ಈ ರೀತಿ ನುಗ್ಗಿದರೆ ಸುಮ್ಮನೆ ಬಿಡುತ್ತೀರಾ’ ಎಂದು ಖಾರವಾಗಿ ಪ್ರಶ್ನಿಸಿತು.
‘ಇಂತಹ ಸಂದರ್ಭಗಳಲ್ಲಿ ಪೂರ್ವಭಾವಿಯಾಗಿ ಯಾಕೆ ನೋಟಿಸ್ ನೀಡಿಲ್ಲ? ಇಲ್ಲಿ ಎಂವಿಐ ಸ್ವತಃ ದೂರುದಾರ. ಅವರೇ ಆರೋಪಿ ಮನೆಗೆ ನುಗ್ಗಿ ಕಾರನ್ನು ಎಳೆಸಿಕೊಂಡು ಹೋಗಿದ್ದಾರೆ. ಬೆಲೆಬಾಳುವ ಕಾರಿಗೆ ಏನಾದರೂ ಕಿಂಚಿತ್ ಗೆರೆಯಾಗಿದ್ದರೂ, ಅದನ್ನು ಸರಿಪಡಿಸಲು ಅವರ ಜೇಬಿನಿಂದಲೇ ಹಣ ಖರ್ಚು ಮಾಡಿಸುತ್ತೇನೆ. ಈ ಅಧಿಕಾರಿಯನ್ನು ಅಮಾನತುಗೊಳಿಸಲು ಆದೇಶಿಸುತ್ತೇನೆ ಮತ್ತು ಇಲಾಖಾ ತನಿಖೆಗೆ ಆದೇಶಿಸುತ್ತೇನೆ’ ಎಂದು ಕಠಿಣ ಧ್ವನಿಯಲ್ಲಿ ಎಚ್ಚರಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಿದ ನ್ಯಾಯಪೀಠ, ‘ಅರ್ಜಿದಾರರು ತಕ್ಷಣವೇ ಕಾರನ್ನು ತಮ್ಮ ವಶಕ್ಕೆ ಪಡೆಯಲು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕೋರ್ಟ್ ಈ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 18ಕ್ಕೆ ನಿಗದಿಪಡಿಸಿತು.
ಅರ್ಜಿದಾರರು ಆರ್‌ಟಿಒ ಅಧಿಕಾರಿಗಳನ್ನು ನೋಡಿಕೊಂಡಿಲ್ಲ ಎಂದು ರಾತ್ರೋರಾತ್ರಿ ಮನೆಗೆ ನುಗ್ಗಿ ಲ್ಯಾಂಬೋರ್ಗಿನಿಯಂತಹ ಕಾರನ್ನು ಎಳೆದೊಯ್ಯಲಾಗಿದೆಯೇ? ಇದನ್ನೆಲ್ಲಾ ನೋಡಿದರೆ ಈ ಅಧಿಕಾರಿಗಳಿಗೆ ಆತ್ಮಸಾಕ್ಷಿ ಇದೆಯಾ ಎನಿಸುತ್ತದೆ.ನ್ಯಾ.ಎಂ.ನಾಗಪ್ರಸನ್ನ
ಪ್ರಾಸಿಕ್ಯೂಷನ್ ಆರೋಪ ಏನು?
‘ಹರ್ಷ ಇನ್ಫ್ರಾ ಕಾನ್ಸ್ ಪ್ರೈವೇಟ್ ಲಿಮಿಟೆಡ್’ 2022ರಲ್ಲಿ ಲ್ಯಾಂಬೋರ್ಗಿನಿ ಪ್ರಕರಣದಲ್ಲಿ ಸಿಲುಕಿರುವ ಕಾರನ್ನು ಖರೀದಿಸಿತ್ತು. ಇದರ ನೋಂದಣಿಗಾಗಿ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಮೂರು ವರ್ಷ ಬಳಕೆ ಮಾಡಿದ ನಂತರ ಅರ್ಜಿದಾರರಿಗೆ ಮಾರಾಟ ಮಾಡಿತ್ತು. ‘ವಾಹನ ನೋಂದಣಿ ಸಮಯದಲ್ಲಿ ದಾಖಲೆಗಳನ್ನು ನಕಲಿ ಮಾಡಿ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ವಂಚಿಸಲಾಗಿದೆ’ ಎಂಬುದು ಪ್ರಾಸಿಕ್ಯೂಷನ್ ಆರೋಪ. ಈ ಸಂಬಂಧ ಕಾರಿನ ಮಾಲೀಕರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ–2023ರ ಕಲಂ 528ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದನ್ನು ಅಲ್ಲಗಳೆದಿರುವ ಅರ್ಜಿದಾರರು ‘ಡೀಲರ್ ಮುಖಾಂತರ ಕಾರನ್ನು ಖರೀದಿಸಲಾಗಿದೆ. ₹1 ಕೋಟಿ ಜಿಎಸ್‌ಟಿ ಮತ್ತು ₹60 ಲಕ್ಷ ರಸ್ತೆ ತೆರಿಗೆ ಪಾವತಿ ಮಾಡಲಾಗಿದೆ. ಬೆಂಗಳೂರು ಪೂರ್ವ ವಲಯದ ಆರ್‌ಟಿಒ ವಾಹನವನ್ನು ನೋಂದಾಯಿಸಿ ಅದಕ್ಕೆ ಸಂಖ್ಯೆಯನ್ನೂ ನೀಡಿದ್ದಾರೆ’ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.