ADVERTISEMENT

ಸಿದ್ದರಾಮಯ್ಯ ವಿರುದ್ಧ ಆರೋಪ: ಶಾಸಕ ಹರೀಶ್‌ ಪೂಂಜಾ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 19:28 IST
Last Updated 9 ಜೂನ್ 2023, 19:28 IST
ಹರೀಶ್‌ ಪೂಂಜಾ
ಹರೀಶ್‌ ಪೂಂಜಾ   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ‘ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

’ನನ್ನ ವಿರುದ್ಧ ಬೆಳ್ತಂಗಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು‘ ಎಂದು ಕೋರಿ ಹರೀಶ್ ಪೂಂಜಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. 

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಅವರು, ’ಅರ್ಜಿದಾರರು ನೀಡಿದ ಹೇಳಿಕೆಯಿಂದ ಯಾವುದೇ ಹಿಂಸಾಚಾರ, ಶಾಂತಿಭಂಗ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆಯಾದ ಪ್ರಕರಣ ನಡೆದಿಲ್ಲ. ಇದು ರಾಜಕೀಯ ಪ್ರೇರಿತ, ದುರುದ್ದೇಶ ಮತ್ತು ದ್ವೇಷಭಾವನೆಯಿಂದ ದಾಖಲಿಸಿರುವ ದೂರು. ಪೊಲೀಸರು ಆಡಳಿತ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಎಫ್‌ಐಆರ್ ದಾಖಲಿಸಿದ್ದಾರೆ. ಇದು ಕಾನೂನು ಬಾಹಿರ ಮತ್ತು ಸಂವಿಧಾನದ 14 ಮತ್ತು 21ನೇ ವಿಧಿಯ ಅಡಿಯಲ್ಲಿ ಕೊಡಲಾದ ಮೂಲ ಹಕ್ಕುಗಳ ಉಲ್ಲಂಘನೆ. ಆದ್ದರಿಂದ ತನಿಖೆಗೆ ತಡೆ ನೀಡಬೇಕು‘ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ತನಿಖೆಗೆ ತಡೆ ನೀಡಿ ವಿಚಾರಣೆ ಮುಂದೂಡಿದೆ.

ADVERTISEMENT
ಪ್ರಕರಣವೇನು?:
’ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಹರೀಶ್ ಪೂಂಜಾ ಅವರಿಗೆ ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನ ಜೈನ್ ಪಟೇಲ್ ಸಭಾಂಗಣದಲ್ಲಿ 2023ರ ಮೇ 22ರಂದು ಬಿಜೆಪಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹರೀಶ್ ಪೂಂಜಾ ಕೋಮು ಪ್ರಚೋದಕ ಮತ್ತು ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡಬೇಕು ಹಾಗೂ ಶಾಂತಿ ಕದಡಬೇಕು ಎಂಬ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ‘ ಎಂದು ಆರೋಪಿಸಿ ನಮಿತಾ ಕೆ.ಪೂಜಾರಿ  ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು, ಭಾರತೀಯ ದಂಡ ಸಂಹಿತೆ ಐಪಿಸಿ 153, 153 (ಎ) 505 ಮತ್ತು 505 (ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.