ಬೆಂಗಳೂರು: ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇದೇ 5ರಂದು (ಮಂಗಳವಾರ) ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹಕ್ಕೆ ಹೈಕೋರ್ಟ್ ಒಂದು ದಿನದ ಮಟ್ಟಿಗೆ ತಡೆ ನೀಡಿದೆ.
‘ಮುಷ್ಕರ ನಡೆಸಲು ಸಿಬ್ಬಂದಿಗೆ ಅವಕಾಶ ನೀಡಬಾರದು’ ಎಂದು ಕೋರಿ ನಗರದ ಜೆ.ಸುನಿಲ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್, ‘ರಾಜ್ಯ ಸರ್ಕಾರ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-2013ರ (ಎಸ್ಮಾ) ಅಡಿಯಲ್ಲಿ ಜುಲೈ 14ರಿಂದ ಅನ್ವಯ ಆಗುವಂತೆ ಮುಷ್ಕರ ನಿಷೇಧಿಸಿದೆ. ಆದರೂ, ಸಾರಿಗೆ ನೌಕರರು ಇದನ್ನು ಲೆಕ್ಕಿಸದೆ ಇದೇ 5ರಿಂದ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಭಾರಿ ತೊಂದರೆಯಾಗಲಿದೆ’ ಎಂದರು.
ಸಾರಿಗೆ ಇಲಾಖೆ ಪರ ಹಿರಿಯ ವಕೀಲೆ ಎಚ್.ಆರ್. ರೇಣುಕಾ, ‘ಕಾರ್ಮಿಕ ಸಂಧಾನ ಅಧಿಕಾರಿ ಸಮ್ಮುಖದಲ್ಲಿ ಸರ್ಕಾರ ಮತ್ತು ನೌಕರರ ಸಂಘದ ಪ್ರತಿನಿಧಿಗಳ ಜೊತೆ ಸಂಧಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಸಾರಿಗೆ ಸಿಬ್ಬಂದಿಯೊಂದಿಗೆ ಸಭೆ ನಡೆದಿದೆ.ಕಾರ್ಮಿಕ ನ್ಯಾಯ ಮಂಡಳಿಯಲ್ಲಿ ಇದೇ 7ರಂದು ವಿಚಾರಣೆ ನಿಗದಿಯಾಗಿದೆ. ಹೀಗಾಗಿ, ಕನಿಷ್ಠ ಎರಡು ದಿನದ ಮಟ್ಟಿಗೆ ವಿಚಾರಣೆ ಮುಂದೂಡಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಪರ ವಕೀಲರು ‘ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಬೆಳಿಗ್ಗೆಯಿಂದ ನಿರಂತರ ಸಭೆ ನಡೆದಿದೆ. ಅಡ್ವೊಕೇಟ್ ಜನರಲ್ ದೆಹಲಿ ಪ್ರವಾಸದಲ್ಲಿದ್ದಾರೆ. ಹೀಗಾಗಿ, ಅರ್ಜಿ ವಿಚಾರಣೆ ಮುಂದೂಡಬೇಕು’ ಎಂದು ಕೋರಿದರು.
ಎಲ್ಲರ ವಾದ ಆಲಿಸಿದ ನ್ಯಾಯಪೀಠ, ‘ಮುಖ್ಯಮಂತ್ರಿ ಮತ್ತು ಸಾರಿಗೆ ಸಿಬ್ಬಂದಿ ನಡುವೆ ನಡೆದ ಸಭೆಯ ನಿರ್ಧಾರಗಳನ್ನು ಕೋರ್ಟ್‌ಗೆ ಸಲ್ಲಿಸಿ ಮತ್ತು ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುವ ಕಾರಣ ಪ್ರತಿಭಟನಾಕಾರರು ಒಂದು ದಿನದ ಮಟ್ಟಿಗೆ ಉದ್ದೇಶಿತ ಮುಷ್ಕರವನ್ನು ಮುಂದೂಡಬೇಕು’ ಎಂದು ನಿರ್ದೇಶಿಸಿತು.
ರಾಜ್ಯ ಸರ್ಕಾರ, ಸಾರಿಗೆ ಇಲಾಖೆ, ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮಂಗಳವಾರಕ್ಕೆ (ಆ.5) ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.