ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕೆಲ ಸಹ ಪ್ರಾಧ್ಯಾಪಕರಿಗೆ ಬಡ್ತಿ ನೀಡಲು ಕಾಲೇಜು ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾದವರು ನಿಗದಿತ ಅವಧಿ ಪೂರ್ಣಗೊಳಿಸಿದ ನಂತರ ಯುಜಿಸಿಯ ಯಾವ ನಿಯಮದ ಅಡಿ ಸಹ ಪ್ರಾಧ್ಯಾಪಕರಾಗಿ ಪದೋನ್ನತಿ ಪಡೆಯುತ್ತಾರೋ, ಅದೇ ನಿಯಮ ಅಥವಾ ಅದಕ್ಕಿಂತ ನಂತರ ರೂಪಿಸಿದ ಹೊಸ ನಿಯಮಗಳ ಅನ್ವಯವೇ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಪಡೆಯಬೇಕು ಎನ್ನುವುದು ನಿಯಮ. 2018ರ ಯುಜಿಸಿ ನಿಯಮಗಳ ಅನ್ವಯ 2021ರಲ್ಲಿ ಸಹ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಈಗ 2010ರ ಯುಜಿಸಿ ನಿಯಮಗಳನ್ನು ಬಳಸಿಕೊಂಡು ಪ್ರಾಧ್ಯಾಪಕ ಸ್ಥಾನಕ್ಕೆ ಬಡ್ತಿ ನೀಡಲು ಮುಂದಾಗಿರುವ ಇಲಾಖೆ, ಅರ್ಹತೆ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಯುಜಿಸಿ ಕಾಲಕಾಲಕ್ಕೆ ನಿಯಮಗಳನ್ನು ಬದಲಾವಣೆ ಮಾಡುತ್ತಾ ಬರುತ್ತದೆ. ಆ ನಿಯಮಗಳಿಗೆ ಒಳಪಟ್ಟು ಉನ್ನತ ಶಿಕ್ಷಣದಲ್ಲಿನ ನೇಮಕಾತಿ, ಬಡ್ತಿ, ವೇತನ ಶ್ರೇಣಿಯನ್ನು ನಿಗದಿ ಮಾಡಲಾಗುತ್ತದೆ. ಹೊಸ ನಿಯಮಗಳು ಜಾರಿಯಾದಾಗ ಆ ನಿಯಮಗಳ ಅನ್ವಯವೇ ನೇಮಕಾತಿ, ಬಡ್ತಿ, ವೇತನ ನಗದೀಕರಣವನ್ನು ಬೋಧಕ, ಬೋಧಕೇತರ ಸಿಬ್ಬಂದಿ ಪಡೆಯುತ್ತಾರೆ.
ತಾವು ಸೌಲಭ್ಯ ಪಡೆದ ನಿಯಮ ಹಾಗೂ ಅದಕ್ಕಿಂತ ಮುಂದಿನ ಹೊಸ ನಿಯಮಗಳ ಅನ್ವಯ ಅಂಥವರಿಗೆ ಬಡ್ತಿ ನೀಡಬೇಕು. ಅದಕ್ಕಿಂತ ಹಿಂದಿನ ನಿಯಮ ಅನ್ವಯಿಸಿ, ಸೌಲಭ್ಯ ದೊರಕಿಸುವಂತಿಲ್ಲ. ಆದರೆ, ಕಾಲೇಜು ಶಿಕ್ಷಣ ಇಲಾಖೆಯ ಹೊಸ ನಡೆ ಅನುಮಾನಕ್ಕೆ ಕಾರಣವಾಗಿದೆ.
2018ರ ನಿಯಮದಂತೆ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು ಪಿಎಚ್.ಡಿ. ಪಡೆದಿರಬೇಕು. ಅದಲ್ಲದೆ, ಯುಜಿಸಿಯಿಂದ ಅನುಮೋದಿತವಾದ ಪತ್ರಿಕೆಗಳಲ್ಲಿ ಪ್ರಕಟವಾದ 10 ಲೇಖನಗಳನ್ನು ಐಎಸ್‌ಎಸ್‌ಎನ್ (ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಸೀರಿಯಲ್ ನಂಬರ್) ಅಥವಾ ಐಎಸ್‌ಬಿಎನ್ ಸಂಖ್ಯೆ (ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್) ಸಹಿತ ಸಲ್ಲಿಸಬೇಕು. ಅಲ್ಲದೇ, ಸಹ ಪ್ರಾಧ್ಯಾಪಕರಾಗಿ ಮೂರು ವರ್ಷ ಕೆಲಸ ಮಾಡಿದ್ದಾಗ ಕಡ್ಡಾಯವಾಗಿ ಮೂರು ಲೇಖನಗಳನ್ನು ಪ್ರಕಟಿಸಿರಬೇಕು.
2010ರ ನಿಯಮದ ಪ್ರಕಾರ ಐದು ಲೇಖನಗಳು ಪ್ರಕಟವಾಗಿದ್ದರೆ ಸಾಕು. ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುವಾಗ ಕಡ್ಡಾಯವಾಗಿ ಮೂರು ಲೇಖನ ಪ್ರಕಟವಾಗಿರಬೇಕು ಎಂಬ ಷರತ್ತು ಇಲ್ಲ. ಹಾಗಾಗಿ, 2021ರಲ್ಲಿ 2018ರ ಯುಜಿಸಿ ನಿಯಮದ ಅನ್ವಯ ಸಹ ಪ್ರಾಧ್ಯಾಪಕರಾಗಿ ಬಡ್ತಿ ಪಡೆದ ಬಹುತೇಕರು ನಿಗದಿತ ಸಂಖ್ಯೆಯ ಲೇಖನ ಪ್ರಕಟಿಸದ ಕಾರಣ ನಿಯಮಕ್ಕೆ ವಿರುದ್ಧವಾಗಿ 2010ರ ನಿಯಮದ ಅನ್ವಯ ಅರ್ಜಿ ಸಲ್ಲಿಸಿದ್ದಾರೆ. ಅಂತಹ ಅರ್ಜಿಗಳನ್ನು ಮಾನ್ಯ ಮಾಡಿರುವ ಕಾಲೇಜು ಶಿಕ್ಷಣ ಇಲಾಖೆ ಅವನ್ನು ಬಡ್ತಿಗೆ ಪರಿಗಣಿಸಿದೆ.
ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದವರ ಅರ್ಹತೆ ಪರಿಶೀಲನೆಗೆ ಸಹಾಯಕ ಪ್ರಾಧ್ಯಾಪಕರನ್ನು ಕಾಲೇಜು ಶಿಕ್ಷಣ ಇಲಾಖೆ ನೇಮಕ ಮಾಡಿಕೊಂಡಿದೆ.
ಬಡ್ತಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಲು ನಿಯಮದಂತೆ ವಿಶ್ವವಿದ್ಯಾಲಯಗಳ ವಿಷಯವಾರು ಪ್ರಾಧ್ಯಾಪಕರನ್ನು ನಿಯೋಜಿಸಬೇಕು. ಆದರೆ, 2017ರಲ್ಲಿ ಪ್ರಥಮ ದರ್ಜೆ ಕಾಲೇಜುಗಳಿಗೆ ನೇಮಕವಾದ ಮೂವರು ಸಹಾಯಕ ಪ್ರಾಧ್ಯಾಪಕರನ್ನು ಬಡ್ತಿ ಮತ್ತು ಸ್ಥಾನೀಕರಣ ವಿಭಾಗಕ್ಕೆ ನಿಯೋಜನೆ ಮಾಡಿಕೊಂಡು ಅವರಿಂದ ಅರ್ಜಿಗಳ ಪರಿಶೀಲನೆ ನಡೆಸಲಾಗಿದೆ ಎಂದು ಹಲವು ಸಹ ಪ್ರಾಧ್ಯಾಪಕರು ದೂರಿದ್ದಾರೆ.
ಬಹುತೇಕ ಸಹ ಪ್ರಾಧ್ಯಾಪಕರ ಪಿಎಚ್.ಡಿ ಪದವಿ ನಕಲಿ ಎನ್ನುವುದು ಸಾಬೀತಾಗಿದೆ. ಕೆಲವರು ಹಣಕೊಟ್ಟು ತಮ್ಮ ಹೆಸರಿನಲ್ಲಿ ಲೇಖನ ಬರೆಸಿದ್ದಾರೆ. ಐಎಸ್‌ಎಸ್‌ಎನ್ ಸಂಖ್ಯೆ ಇರುವ ಪ್ರಮಾಣಪತ್ರ ಪಡೆದಿದ್ದಾರೆ ಎನ್ನುವ ಸಾಕಷ್ಟು ದೂರುಗಳು ದಾಖಲೆ ಸಹಿತ ಕಾಲೇಜು ಶಿಕ್ಷಣ ಇಲಾಖೆಗೆ ಸಲ್ಲಿಕೆಯಾಗಿದ್ದರೂ ಈ ಕುರಿತು ಕ್ರಮ ಕೈಗೊಂಡಿಲ್ಲ. ಅಂಥವರಿಗೂ ಪದೋನ್ನತಿ ನೀಡಲಾಗುತ್ತಿದೆ ಎನ್ನುತ್ತಾರೆ ಸಹ ಪ್ರಾಧ್ಯಾಪಕ ಕಿರಣ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.