ADVERTISEMENT

ಬೆಂಗಳೂರು: ಪ್ರಾಂಶುಪಾಲರ ಹುದ್ದೆ ಸೇವಾನಿರತರಿಗೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 19:20 IST
Last Updated 13 ಜನವರಿ 2026, 19:20 IST
<div class="paragraphs"><p>ಪ್ರಾಂಶುಪಾಲ</p></div>

ಪ್ರಾಂಶುಪಾಲ

   

– ಗೆಟ್ಟಿ ಚಿತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ನೇರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಸೇವಾಜ್ಯೇಷ್ಠತೆಯ ಆಧಾರದಲ್ಲಿ ಹಾಲಿ ಇರುವ ಅಧ್ಯಾಪಕರಿಗೆ ಬಡ್ತಿ ನೀಡಿ, ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಉನ್ನತ ಶಿಕ್ಷಣ ಚಿಂತನಾ ವೇದಿಕೆ ಒತ್ತಾಯಿಸಿದೆ.

ADVERTISEMENT

ಪ್ರಾಂಶುಪಾಲರ 310 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ನೇರ ಪರೀಕ್ಷೆ ನಡೆಸಿದೆ. 15 ವರ್ಷಗಳಿಂದ ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗಳೇ ನಡೆದಿರಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್‌ 2022ರಲ್ಲಿ ಅಧಿಸೂಚನೆ ಹೊರಡಿಸಿತ್ತು. ತಾಂತ್ರಿಕ ಕಾರಣಗಳಿಂದ ನಿಗದಿಯಾಗಿದ್ದ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ 2023ರ ಜುಲೈ 30ರಂದು ಪರೀಕ್ಷೆ ನಡೆಸಲಾಗಿತ್ತು. ನೇಮಕಾತಿ ನಿಯಮಗಳು ಗೊಂದಲದಿಂದ ಕೂಡಿದ್ದು, ಅಧಿಸೂಚನೆಯ ನಂತರವೂ ಬದಲಾವಣೆ ಮಾಡುತ್ತಲೇ ಬರಲಾಗಿದೆ. ವಯೋಮಿತಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಅಂತರ್‌ ಇಲಾಖಾ ನೌಕರರಿಗೆ ಅವಕಾಶ ಸೇರಿದಂತೆ ಹಲವು ಗೊಂದಲಗಳು ಇದ್ದವು. ಅರ್ಜಿ ಸಲ್ಲಿಸುವ ಅವಧಿಯನ್ನೂ ಎರಡು ಬಾರಿ ಮುಂದೂಡಲಾಯಿತು. ತಾತ್ಕಾಲಿಕ ಆಯ್ಕೆಪಟ್ಟಿಗೆ ಸಲ್ಲಿಕೆಯಾದ ಆಕ್ಷೇಪಣೆಗಳಿಗೂ ಸರಿಯಾದ ಪ್ರತಿಕ್ರಿಯೆ ನೀಡದೆ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಟಿ.ರಾಮಲಿಂಗಪ್ಪ, ಡಿ.ರಮೇಶ್‌, ಶ್ರೀನಿವಾಸ ಗೌಡ, ಮುನಿರಾಮಪ್ಪ ಮತ್ತಿತರರು ದೂರಿದ್ದಾರೆ.

1960ರಿಂದ 2009ರವರೆಗೂ ಪ್ರಾಂಶುಪಾಲರ ಹುದ್ದೆಗಳನ್ನು ಸೇವಾ ಜ್ಯೇಷ್ಠತೆಯ ಆಧಾರದಲ್ಲೇ ನೀಡಲಾಗುತ್ತಿತ್ತು. 2009ರಿಂದ ಇಲ್ಲಿಯವರೆಗೂ ಕಾಯಂ ಪ್ರಾಂಶುಪಾಲರ ನೇಮಕವೇ ಆಗಿಲ್ಲ. ಪ್ರಭಾರ ಕಾರ್ಯದಲ್ಲೇ ಹಲವು ಅಧ್ಯಾಪಕರು ಸೇವಾವಧಿ ಮುಗಿಸಿದ್ದಾರೆ. ಈಗಲಾದರೂ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಬೋಧಕ ಸಿಬ್ಬಂದಿಯನ್ನೇ ಕಾಯಂ ನೇಮಕ ಮಾಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.