ADVERTISEMENT

‘ಮೈತ್ರಿ’ ಮುನಿಸು ಬಯಲಿಗೆ: ಮಂಡ್ಯದಲ್ಲಿ ಬಿಜೆಪಿ–ಕಾಂಗ್ರೆಸ್ ಚಕ್ರವ್ಯೂಹ ಎಂದ ಸಿಎಂ

ಮೈಸೂರಿನಲ್ಲಿ ಮೋದಿಗೆ ಜೈ: ಮಧುಗಿರಿಯಲ್ಲಿ ದೂರ ಉಳಿದ ಮುದ್ದಹನುಮೇಗೌಡ, ರಾಜಣ್ಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 18:44 IST
Last Updated 5 ಏಪ್ರಿಲ್ 2019, 18:44 IST
   

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್‌ ಮೈತ್ರಿಕೂಟದ ರಾಜ್ಯನಾಯಕರು ಜುಗಲ್‌ಬಂದಿ ಮೂಲಕ ಪ್ರಚಾರಕ್ಕೆ ಅಬ್ಬರ ತಂದಿರುವ ಬೆನ್ನಲ್ಲೇ, ಉಭಯ ಪಕ್ಷಗಳಲ್ಲಿನ ಸ್ಥಳೀಯ ಮಟ್ಟದ ನಾಯಕರ ಮಧ್ಯದ ವೈಮನಸ್ಸು, ಅಸಹನೆ ಹಳೆ ಮೈಸೂರು ಭಾಗದಲ್ಲಿ ಬಯಲಿಗೆ ಬಂದಿದೆ.

ಆದರೆ, ಬೆಂಗಳೂರು ನಗರದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಎಂಬ ಭೇದ ತೋರದೇ ಎಲ್ಲರೂ ಒಗ್ಗೂಡಿ ಮಿತ್ರಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬೆಂಗಳೂರು ಉತ್ತರ ಮತ್ತು ಕೇಂದ್ರ ಕ್ಷೇತ್ರಗಳ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿ, ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿ ಒಗ್ಗಟ್ಟು ಮೆರೆದರು.

ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರಚಾರದಿಂದ ದೂರ ಉಳಿದಿದ್ದರು. ಅವರ ಮತ್ತು ಸಿದ್ದರಾಮಯ್ಯ ಮಧ್ಯೆ ಸಂಧಾನ ನಡೆದಿದ್ದು, ಇಬ್ಬರ ಮಧ್ಯೆ ಒಮ್ಮತ ಮೂಡಿದೆ. ಆದರೆ, ಕಾರ್ಯಕರ್ತರ ಮಟ್ಟದಲ್ಲಿ ಸಿಟ್ಟು ಬೆಂಕಿಯಂತೆ ಪ್ರವಹಿಸುತ್ತಿರುವುದು ಶುಕ್ರವಾರ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಬಹಿರಂಗವಾಗಿದೆ.

ADVERTISEMENT

ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ತಿನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ, ಕಾಂಗ್ರೆಸ್‌ ಅಭ್ಯರ್ಥಿ ವಿಜಯಶಂಕರ್ ಪರ ಕೆಲಸ ಮಾಡುವಂತೆ ಕೋರಿದರು. ಇದರಿಂದ ಸಿಡಿಮಿಡಿಗೊಂಡ ಕಾರ್ಯಕರ್ತರು, ‘ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ‌ ಕೆಲಸ‌ ಮಾಡಿ ಪೊಲೀಸ್ ಸ್ಟೇಷನ್,‌ ಕೋರ್ಟ್ ಮೆಟ್ಟಿಲು ಹತ್ತಿದ್ದೇವೆ. ಈಗ ನೀವು ಒಪ್ಪಂದ‌ ಮಾಡಿಕೊಂಡು ಬಂದರೆ, ನಾವೀಗ ವೋಟ್ ಹಾಕಬೇಕೆ’ ಎಂದು ಪ್ರಶ್ನಿಸಿದರು. ‘ನರೇಂದ್ರ ಮೋದಿಗೆ ಜೈ’ ಎಂದು ಕೂಗಿ ಗದ್ದಲ ಹೆಚ್ಚಿಸಿದರು.

ಮಧುಗಿರಿಯಲ್ಲಿ ‘ಭಿನ್ನಮತ‘: ತುಮಕೂರು ಕ್ಷೇತ್ರದ ‘ಮೈತ್ರಿ’ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಮಧುಗಿರಿಯಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಕಾಂಗ್ರೆಸ್‌ ಮುಖಂಡ ಟಿ.ಬಿ. ಜಯಚಂದ್ರ, ಜೆಡಿಎಸ್ ಶಾಸಕ ಎಂ. ವೀರಭದ್ರಯ್ಯ ಭಾಗಿಯಾಗಿದ್ದರು. ತುಮಕೂರು ಕಾಂಗ್ರೆಸ್‌ ಸಂಸದ ಎಸ್‌.ಪಿ. ಮುದ್ದ ಹನುಮೇಗೌಡ ಹಾಗೂ ಮುಖಂಡ ಕೆ.ಎನ್. ರಾಜಣ್ಣ ಸಭೆಯಿಂದ ಹೊರಗುಳಿದು ತಮ್ಮ ಅಸಮಾಧಾನ ಹೊರಹಾಕಿದರು.

‘ಮೈತ್ರಿ ಒಪ್ಪಂದದಿಂದಾಗಿ ಪಕ್ಷದ ಕಾರ್ಯಕರ್ತರ ಮನವೊಲಿಸುವುದು ತುಂಬಾ ಕಷ್ಟವಾಗಿ ಪರಿಣಮಿಸಿದೆ. ಆದರೂ ಅನಿವಾರ್ಯವಾಗಿ ಈ ಕೆಲಸ ಮಾಡಬೇಕಾಗಿದೆ. ನಮ್ಮನ್ನೆಲ್ಲ ಮೂಲೆಗುಂಪು ಮಾಡಲಾಗುತ್ತಿದೆ’ ಎಂದು ರಾಜಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮಂಡ್ಯದಲ್ಲಿ ಬಿಜೆಪಿ–ಕಾಂಗ್ರೆಸ್‌ ಚಕ್ರವ್ಯೂಹ: ಎಚ್‌ಡಿಕೆ
ಕೊಪ್ಪ (ಚಿಕ್ಕಮಗಳೂರು): ‘ಜೆಡಿಎಸ್‌ ಅಭ್ಯರ್ಥಿ(ನಿಖಿಲ್‌) ಮಣಿಸಲು ಮಂಡ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌, ರೈತಸಂಘದ ನಾಯಕರು ಒಗ್ಗೂಡಿದ್ದಾರೆ. ಅವರೆಲ್ಲ ಸೇರಿ ಚಕ್ರವ್ಯೂಹ ರಚಿಸಿರುವುದಕ್ಕೆ ಅಲ್ಲಿನ ಜನರು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಡ್ಯದಲ್ಲಿ ಕೈಮೀರುವಂಥ ಕೆಲ ಘಟನೆಗಳು ನಡೆದಿವೆ. ಪಕ್ಷೇತರ ಅಭ್ಯರ್ಥಿಗೆ (ಎ.ಸುಮಲತಾ) ಅಲ್ಲಿನ ಬಿಜೆಪಿ, ಕಾಂಗ್ರೆಸ್‌, ರೈತಸಂಘದ ಬೆಂಬಲ ಇದೆ. ಹೆಸರಿಗಷ್ಟೇ ಅವರು ಪಕ್ಷೇತರ ಅಭ್ಯರ್ಥಿ’ ಎಂದು ಕಟಕಿಯಾಡಿದರು.

‘ಮೂರು ತಿಂಗಳಿನಿಂದ ನಡೆಯುತ್ತಿರುವ ಘಟನೆಗಳು ಗೊತ್ತಿವೆ. ಆದರೆ, ಅಲ್ಲಿನ ಹಳ್ಳಿಗಳಲ್ಲಿ ಪರಿಸ್ಥಿತಿ ಬೇರೆ ಇದೆ. ಮೇ 23ರಂದು ಎಲ್ಲರಿಗೂ ಉತ್ತರ ನೀಡುತ್ತೇನೆ’ ಎಂದು ಹೇಳಿದರು.

**

ನಾನು ಮತ್ತು ದೇವೇಗೌಡರು ಇದೇ 9ಕ್ಕೆ ಮಂಡ್ಯಕ್ಕೆ ಹೋಗುತ್ತಿದ್ದೇವೆ. ಎಲ್ಲರನ್ನೂ ಸೇರಿಸಿಕೊಂಡು ಪ್ರಚಾರ ಮಾಡುತ್ತೇವೆ. ಯಾವುದೇ ಗೊಂದಲ ಇಲ್ಲ.
–ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.